ಮಂಗಳೂರಿಗೆ ಹೊಸ ವಿಮಾನ ಕಷ್ಟ

mangalore Airport
Published on

ವೇಣುವಿನೋದ್ ಕೆ.ಎಸ್.ಮಂಗಳೂರು

ರಾಜ್ಯದಲ್ಲಿನ ದುಬಾರಿ ಇಂಧನ ತೆರಿಗೆ ಕಾರಣ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ವಿಮಾನಗಳು ಬರಲು ಅಡ್ಡಿಯಾಗಿದ್ದು, ಕಳೆದ ಸಾಲಿನಲ್ಲಿ ಹಾರಾಟ ಹಾಗೂ ಪ್ರಯಾಣಿಕರ ಪ್ರಮಾಣ ಗಣನೀಯವಾಗಿ ಕುಸಿದಿದೆ.

ರಾಜ್ಯದಲ್ಲಿ ಏರ್‌ಲೈನ್ ಟರ್ಬೈನ್ ಫ್ಯುಯಲ್(ಎಟಿಎಫ್) ಅಥವಾ ಏವಿಯೇಷನ್ ಪೆಟ್ರೋಲ್ ಮೇಲೆ ಶೇ. 28 ಮಾರಾಟ ತೆರಿಗೆ ಹಾಕಲಾಗುತ್ತಿರುವುದು ಮಂಗಳೂರಿನಿಂದ ಹೊಸ ವಿಮಾನಗಳ ಆರಂಭಕ್ಕೆ ತಡೆಯಾಗಿದ್ದು, ಅವೆಲ್ಲವೂ ಹತ್ತಿರದ ಕಣ್ಣೂರಿನತ್ತ ಕಣ್ಣಿಟ್ಟಿವೆ. ಹೊಸದಾಗಿ ಆರಂಭವಾಗಿರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಟಿಎಫ್ ಮೇಲಿನ ತೆರಿಗೆ ಕೇವಲ ಶೇ.1. ಹಾಗಾಗಿ ಟಿಕೆಟ್ ಬೆಲೆಯೂ ಕಡಿಮೆ. ಕಣ್ಣೂರು ಮಂಗಳೂರಿನಿಂದ ಬರೇ 175 ಕಿ.ಮೀ ದೂರದಲ್ಲಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರು ಜಿಲ್ಲೆಯಲ್ಲಿರುವ ಈ ಏರ್‌ಪೋರ್ಟ್‌ಗೆ ಸಂಬಂಧಿಸಿದಂತೆ ಮಾತ್ರವೇ ಈ ಮಾರಾಟ ತೆರಿಗೆ ವಿನಾಯಿತಿ ನೀಡಲಾಗಿದೆ. ಇದು ಅಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದರೂ, ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾತ್ರ ಮಾರಕವಾಗಿ ಪರಿಣಮಿಸುತ್ತಿದೆ.

ಕಣ್ಣೂರು ಏರ್‌ಪೋರ್ಟ್ ಈಗಾಗಲೇ ಗರಿಷ್ಠ ಮಟ್ಟದಲ್ಲಿ ಮಂಗಳೂರಿನ ಪ್ರಯಾಣಿಕರನ್ನು ತನ್ನತ್ತ ಸೆಳೆದುಕೊಂಡಿದೆ. 2019ರ ಏಪ್ರಿಲ್-ನವೆಂಬರ್ ಅಂಕಿ ಸಂಖ್ಯೆಗಳನ್ನು ನೋಡಿದರೆ ಶೇ.23ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆ ದಾಖಲಾಗಿದೆ. ವಿಮಾನಗಳ ಹಾರಾಟ ಸಂಖ್ಯೆಯೂ 13,960(ಹಿಂದಿನ ವರ್ಷದ ಇದೇ ಅವಧಿ)ರಿಂದ 10,416ಕ್ಕೆ ಇಳಿದಿದೆ. ಪ್ರಯಾಣಿಕರ ಸಂಖ್ಯೆ 1.27 ಲಕ್ಷದಿಂದ 1.09ಕ್ಕೆ ಬಿದ್ದಿದೆ.

ಜೆಟ್ ಹೋದ ಬಳಿಕ ಹೊಸ ಸಂಸ್ಥೆ ಇಲ್ಲ

ಜೆಟ್ ಏರ್‌ವೇಸ್ ಮುಚ್ಚಿದ ಬಳಿಕ 13 ವಿಮಾನಗಳ ದಿನಂಪ್ರತಿ ಹಾರಾಟ ಸ್ಥಗಿತವಾದಂತಾಗಿದೆ, ಆ ಜಾಗವನ್ನು ಭರ್ತಿ ಮಾಡಲು ಬೇರೆ ಹೊಸ ವಿಮಾನಗಳು ಬರುತ್ತಿಲ್ಲ. ಹೊಸ ವಿಮಾನ ಪರಿಚಯಿಸಲು ಇಲ್ಲಿನ ಅಧಿಕ ಎಟಿಎಫ್ ತೆರಿಗೆ ಮುಖ್ಯ ಕಾರಣ, ಕಣ್ಣೂರಿನಲ್ಲಿ ಶೇ.1 ಇರುವಾಗ ಇಲ್ಲಿ ಶೇ.28 ಇದ್ದರೆ ಹೇಗೆ ತಾನೆ ಇಲ್ಲಿನ ವಿಮಾನಕ್ಕೆ ಲಾಭವಾಗಲು ಸಾಧ್ಯ, ನಾವೂ ಪೈಪೋಟಿಗೆ ಇಳಿಯದಿದ್ದರೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ದೊಡ್ಡ ನಷ್ಟವುಂಟಾಗುವುದು ಖಚಿತ ಎನ್ನುತ್ತಾರೆ ಕೆನರಾ ವಾಣಿಜ್ಯ ಮತ್ತು ಕೈಗರಿಕಾ ಸಂಸ್ಥೆಯ ಅಧ್ಯಕ್ಷ ಐಸಾಕ್ ವಾಸ್.

ಕೇರಳದ ಕಾಂಞಂಗಾಡ್‌ವರೆಗಿನ ವಿಮಾನ ಪ್ರಯಾಣಿಕರೂ ಮೊದಲು ಮಂಗಳೂರು ಏರ್‌ಪೋರ್ಟನ್ನೇ ನೆಚ್ಚಿಕೊಂಡಿದ್ದರು. ಆದರೆ ಕಣ್ಣೂರು ಏರ್‌ಪೋರ್ಟಿನ ಮೂಲಕ ಪ್ರಯಾಣ ಕಡಿಮೆ ವೆಚ್ಚದಾಯಕವಾಗಿರುವ ಕಾರಣ ಕಣ್ಣೂರು ಕಡೆಗೆ ಹೋಗುತ್ತಿದ್ದಾರೆ, ಇದು ಸಹಜ. ಆದರೆ ಮಂಗಳೂರಿನ ಪ್ರಯಾಣಿಕರು ಕೂಡಾ ಟಿಕೆಟ್ ದರ ಕಡಿಮೆ ಎನ್ನುವ ಕಾರಣಕ್ಕೆ ಕಣ್ಣೂರು ಏರ್‌ಪೋರ್ಟಿಗೆ ಹೋಗುವ, ಅಲ್ಲಿಂದ ಬರುವುದು ಲಾಭದಾಯಕ ಎಂದುಕೊಂಡಿರುವುದು ಇಲ್ಲಿಗಂತೂ ಬಲುದೊಡ್ಡ ಹಿನ್ನಡೆ. ಪ್ರಯಾಣಿಕರಷ್ಟೇ ಕಣ್ಣೂರಿಗೆ ಸ್ಥಳಾಂತರವಾಗಿದ್ದಲ್ಲ, ಇದರಿಂದಾಗಿ ಪರೋಕ್ಷವಾಗಿ ಇಲ್ಲಿನ ಹೋಟೆಲ್ ಉದ್ಯಮ, ಮಾಲ್‌ಗಳ ವ್ಯಾಪಾರ, ಪ್ರವಾಸೋದ್ಯಮ ಎಲ್ಲದಕ್ಕೂ ಪರಿಣಾಮ ಉಂಟಾಗಿದೆ. ಒಟ್ಟಾರೆ ಮಂಗಳೂರಿನ ವಹಿವಾಟಿಗೆ ಹೊಡೆತ ಬಿದ್ದಿದೆ.

ಹುಬ್ಬಳ್ಳಿ, ಪೂನಾಗೆ ಹೊಸ ವಿಮಾನ ಮಂಗಳೂರು ವಿಮಾನ ನಿಲ್ದಾಣ ಹಿನ್ನಡೆ ಅನುಭವಿಸುತ್ತಿರುವ ನಡುವೆಯೇ ಹುಬ್ಬಳ್ಳಿಗೆ ಏರ್ ಇಂಡಿಗೊ ವಿಮಾನ ಹಾರಾಟದ ಸುದ್ದಿ ಹೊರಬಿದ್ದಿರುವುದು ತುಸು ಆಶಾದಾಯಕವೆನಿಸಿದೆ. ಮಾರ್ಚ್ 29ರಿಂದ ಮಂಗಳೂರು-ಹುಬ್ಬಳ್ಳಿ ನಡುವೆ ನೇರ ವಿಮಾನ ಹಾರಾಟವಿರಲಿದೆ. ಈಗಾಗಲೇ ವೆಬ್‌ಸೈಟ್‌ಗಳಲ್ಲಿ ಇದರ ವೇಳಾಪಟ್ಟಿಯೂ ಪ್ರಕಟವಾಗಿದೆ. ಈ ಮೊದಲು ಬೆಂಗಳೂರು ಅಥವಾ ಚೆನ್ನೈ ಮೂಲಕ ಹೋಗಬೇಕಿದ್ದು ಪ್ರಯಾಣಕ್ಕೆ 5ರಿಂದ 8 ಗಂಟೆ ತಗಲುತ್ತಿತ್ತು. ಇನ್ನುಮುಂದೆ 1.10 ಗಂಟೆಯಲ್ಲಿ ತಲಪಬಹುದು. ಹುಬ್ಬಳ್ಳಿಯಿಂದ ಸಂಜೆ 5.15ಕ್ಕೆ ಹೊರಟು ಮಂಗಳೂರಿಗೆ 6.25ಕ್ಕೆ ಹಾಗೂ ಮಂಗಳೂರಿನಿಂದ 6.45ಕ್ಕೆ ಹೊರಟು ಹುಬ್ಬಳ್ಳಿಗೆ 7.55ಕ್ಕೆ ತಲಪಲಿದೆ. ಇನ್ನೆರಡು ತಿಂಗಳಲ್ಲಿ ಮಂಗಳೂರು ಹಾಗೂ ಪೂನಾ ನಡುವೆಯೂ ನೂತನ ನೇರ ಹಾರಾಟ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.

ಒಂದೊಮ್ಮೆ ಉತ್ತಮ ಪ್ರಗತಿ ತೋರಿಸುತ್ತಿದ್ದ ಮಂಗಳೂರು ವಿಮಾನ ನಿಲ್ದಾಣವೀಗ ಕುಸಿತದ ಹಾದಿಯಲ್ಲಿದೆ. ಹುಬ್ಬಳ್ಳಿಗೆ ಹೊಸ ವಿಮಾನ ಇದೆ ಎನ್ನಲಾಗುತ್ತಿದೆ, ವೆಬ್‌ಸೈಟಿನಲ್ಲಿ 6000 ರೂ. ಟಿಕೆಟ್ ದರ ತೋರಿಸಲಾಗಿದೆ, ಇದು ದುಬಾರಿಯಾಯ್ತು. ಪ್ರಯಾಣಿಕರು ಬರುತ್ತಾರೆಯೇ ಎನ್ನುವುದನ್ನು ಕಾದುನೋಡಬೇಕು. ಐಸಾಕ್ ವಾಸ್, ಕೆಸಿಸಿಐ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net