31ರಂದು ಮಂಗಳೂರು ವಿಮಾನ ನಿಲ್ದಾಣ ಅದಾನಿಗೆ ಹಸ್ತಾಂತರ

mangalore Airport
Published on

ನವದೆಹಲಿ: ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಗುತ್ತಿಗೆ ಪಡೆದಿರುವ ಅದಾನಿ ಸಮೂಹದ ಕಂಪನಿ ಕೈಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಸ್ತಾಂತರ ಅ.31ರಂದು ನಡೆಯಲಿದೆ.

ಇದನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಗುರುವಾರ ಪ್ರಕಟಿಸಿದೆ. ಈ ಸಂಬಂಧ ಅದಾನಿ ಮಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಕಂಪನಿ ಜತೆ ವಿಮಾನಯಾನ ಸಚಿವಾಲಯದ ಒಪ್ಪಂದ ಗುರುವಾರ ನಡೆಯಿತು. ಒಪ್ಪಂದದಂತೆ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಅದಾನಿ ಕಂಪನಿ ನಿರ್ವಹಿಸಲಿದೆ.

ಕೆಲವು ತಿಂಗಳ ಕಾಲ ವಿಮಾನ ನಿಲ್ದಾಣದ ನಿರ್ದೇಶಕರು ಮುಂದುವರಿಯಲಿದ್ದು, ಬಳಿಕ ಅದಾನಿ ಕಂಪನಿಯು ಮುಖ್ಯಸ್ಥ ಹುದ್ದೆಗೆ ತನ್ನ ಅಧಿಕಾರಿಯನ್ನು ನಿಯೋಜಿಸುವ ಸಾಧ್ಯತೆಗಳಿವೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನಿರ್ವಹಣೆಗೊಳ್ಳುತ್ತಿದ್ದ ವಿಮಾನ ನಿಲ್ದಾಣವನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಸರ್ಕಾರ ಅದಾನಿ ಗ್ರೂಪ್‌ಗೆ 50 ವರ್ಷದ ಅವಧಿಗೆ ಗುತ್ತಿಗೆ ನೀಡಿದೆ. 2018ರ ಡಿಸೆಂಬರ್‌ನಲ್ಲಿ ಈ ಗುತ್ತಿಗೆಗೆ ತಾತ್ವಿಕ ಅನುಮೋದನೆ ಲಭಿಸಿತ್ತು. ಇದೀಗ ಒಪ್ಪಂದದ ಆಡಳಿತಾತ್ಮಕ ಪ್ರಕ್ರಿಯೆಗಳು ನಡೆಯುತ್ತಿದೆ.

ಲಖನೌ (ನವೆಂಬರ್ 2) ಮತ್ತು ಅಹಮದಾಬಾದ್ (ನವೆಂಬರ್ 11) ವಿಮಾನ ನಿಲ್ದಾಣಗಳು ಕೂಡ ಶೀಘ್ರವೇ ಅದಾನಿ ಕಂಪನಿಯ ಪಾಲಾಗಲಿದೆ. ಖಾಸಗೀಕರಣ ಪ್ರಕ್ರಿಯೆ ಭಾಗವಾಗಿ ಈ ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃಧಿಯ ಗುತ್ತಿಗೆಯನ್ನು ಅದಾನಿ ಪಡೆದಿದೆ. ಈ ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್, ವಲಸೆ ಮತ್ತು ಭದ್ರತಾ ಸೇವೆಗಳನ್ನು ಒದಗಿಸುವ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಅದಾನಿ ಸಮೂಹದ ಮೂರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net