

ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ಹಸ್ತಾಂತರಿಸುವ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಕಾನೂನು ಬಾಹಿರ ಎಂದು ಆಕ್ಷೇಪಿಸಿ ‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಉದ್ಯೋಗಿಗಳ ಸಂಘ’ ಪಿಐಎಲ್ ಸಲ್ಲಿಸಿತ್ತು.
ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರು, ಕೇಂದ್ರ ಸರ್ಕಾರ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿ, ತೀರ್ಪು ಕಾಯ್ದಿರಿಸಿತು.
ಏಕಪಕ್ಷೀಯ ನಿರ್ಧಾರ: ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದ ಮಂಡಿಸಿ, ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು 50 ವರ್ಷಗಳ ಅವಧಿಗೆ ಅದಾನಿ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಇದು ಏಕಪಕ್ಷೀಯ ನಿರ್ಧಾರವಾಗಿದೆ. ಗುತ್ತಿಗೆ ಅವಧಿಯಲ್ಲಿ ಎಷ್ಟು ಆದಾಯ ಬರುತ್ತದೆ ಎಂದು ಹೇಳಲಾಗಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಸೇವೆ ಹೊರತುಪಡಿಸಿ ಬಹುತೇಕ ಸೇವೆಗಳನ್ನು ಹಸ್ತಾಂತರಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಏರ್‌ಪೋರ್ಟ್ ಆಸ್ತಿಯಿಂದ ಬರುವ ಬಾಡಿಗೆ ಮತ್ತು ಗುತ್ತಿಗೆ ಹಣವನ್ನು ಗಣನೆಗೆ ತೆಗೆದುಕೊಂಡಿಲ್ಲ. ಮುಂಬೈ ವಿಮಾನ ನಿಲ್ದಾಣದಲ್ಲಿ ಆದಾಯ ಹಂಚಿಕೆ ಮಾದರಿ ಇದೆ. ಈ ಪದ್ಧತಿಯನ್ನು ಮಂಗಳೂರು ವಿಮಾಣ ನಿಲ್ದಾಣದ ವಿಚಾರದಲ್ಲಿ ಅನುಸರಿಸುತ್ತಿಲ್ಲ. ಮೇಲಾಗಿ ಇಡೀ ವಿಮಾಣ ನಿಲ್ದಾಣವನ್ನೇ ಗುತ್ತಿಗೆ ನೀಡಲು ಅವಕಾಶವಿಲ್ಲ. ನಿಲ್ದಾಣದ ಆವರಣವನ್ನು ಮಾತ್ರ ವ್ಯಾಪಾರ ಗುತ್ತಿಗೆಗೆ ನೀಡಬಹುದಾಗಿದೆ. ಆದ್ದರಿಂದ, ಕೇಂದ್ರದ ನಿರ್ಣಯ ರದ್ದುಪಡಿಸಬೇಕೆಂದು ಕೋರಿದರು.
2004ರಲ್ಲಿ ರೂಪಿಸಲಾದ ನೀತಿ: ವಿಮಾನ ನಿಲ್ದಾಣವನ್ನು ಖಾಸಗಿ ಕಂಪನಿಯ ನಿರ್ವಹಣೆ ನೀಡುವುದು ಕೇಂದ್ರದ ನೀತಿ ನಿರ್ಣಯ ವಿಚಾರವಾಗಿದೆ. ಇದು ಇತ್ತೀಚೆಗೆ ತೆಗೆದುಕೊಂಡ ನಿರ್ಣಯವಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ. ನರಗುಂದ್ ವಾದ ಮಂಡಿಸಿದರು. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಪಡಿಸಲು 2004ರಲ್ಲಿಯೇ ನಿರ್ಣಯ ಕೈಗೊಳ್ಳಲಾಗಿದೆ. ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣವನ್ನು ಖಾಸಗಿ ಕಂಪನಿಯ ನಿರ್ವಹಣೆಗೆ ವಹಿಸಿದ ನಿರ್ಣಯವನ್ನು ಅಲ್ಲಿನ ಹೈಕೋರ್ಟ್ ಎತ್ತಿ ಹಿಡಿದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ವಿಮಾನ ನಿಲ್ದಾಣ ಖಾಸಗೀಕರಣದಿಂದ ಬರುವ ಹಣ ವಿಮಾನ ನಿಲ್ದಾಣ ಪ್ರಾಧಿಕಾರದ ನಿಧಿಗೆ ಹೋಗುತ್ತದೆಯೇ ಹೊರತು ಕೇಂದ್ರ ಸರ್ಕಾರಕ್ಕೆ ಬರುವುದಿಲ್ಲ. ಆ ನಿಧಿಯನ್ನು ವಿಮಾನ ನಿಲ್ದಾಣಗಳ ಅಭಿವೃದ್ಧಿ ಚಟುವಟಿಕೆಗೆ ಬಳಸಲಾಗುತ್ತದೆ. ಇದು ಸಣ್ಣ ಮತ್ತು ಮಧ್ಯಮ ಗಾತ್ರದ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಪ್ರತ್ಯೇಕ ಹಣ ಮೀಸಲಿಡುವ ಅಗತ್ಯವೇ ಇರುವುದಿಲ್ಲ ಎಂದರು.