

ಮಂಗಳೂರು: ಅಡ್ಡೂರು ವ್ಯಾಪ್ತಿಯ ಲ್ಗುಣಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಧಕ್ಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯ ತಾಂತ್ರಿಕ ಅಧಿಕಾರಿಗಳಾದ ಡಾ. ಹೆಚ್.ಎಸ್. ಮಹದೇಶ್ವರ, ಗಿರೀಶ್ ಮೋಹನ್ ಎಸ್.ಎನ್. ಮತ್ತು ಸತ್ಯಭಾಮ ಬಿ.ವಿ.ಬಿ ಹಾಗೂ ತಹಶೀಲ್ದಾರರಾದ ಪ್ರಶಾಂತ ವಿ ಪಾಟೀಲ್, ವೃತ್ತ ನಿರೀಕ್ಷಕರುಗಳಾದ ಪ್ರಸಾದ್ ಸುರತ್ಕಲ್, ಪೂರ್ಣಚಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಮರಳು ತೆಗೆದು ಸಾಗಾಟ ಮಾಡಲು ಬಳಸುತ್ತಿದ್ದ ಒಟ್ಟು 16 ಕಬ್ಬಿಣದ ದೋಣಿಗಳನ್ನು ಪತ್ತೆ ಹಚ್ಚಿದ್ದಾರೆ. ಆ ಪೈಕಿ 9 ದೋಣಿಗಳನ್ನು ಅಧಿಕಾರಿಗಳ ತಂಡವು ವಶಕ್ಕೆ ಪಡೆದಿದೆ. ಈ ಸಮಯದಲ್ಲಿ 7 ದೋಣಿಗಳನ್ನು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಉತ್ತರ ಪ್ರದೇಶ, ಬಿಹಾರ ಮೂಲದ ಕಾರ್ಮಿಕರು ದೋಣಿಗಳನ್ನು ನೀರಿನಲ್ಲಿ ಮುಳಗಿಸಿ ಪರಾರಿಯಾಗಿದ್ದಾರೆ. ವಶಕ್ಕೆ ಪಡೆದ 9 ದೋಣಿಗಳನ್ನು ಮಹಮ್ಮದ್ ಝಕಾರಿಯ ಅವರ ಜಾಗದಲ್ಲಿ ತಂದು ಇರಿಸಲಾಗಿತ್ತು. ದೋಣಿಗಳ ಅಂದಾಜು ಮೌಲ್ಯವು 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.