ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತ್ಯು, ಇಬ್ಬರಿಗೆ ಗಾಯ

accident-15
Published on

ಮಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಮಾರ್ನಮಿಕಟ್ಟೆ ಅಂಚೆ ಕಚೇರಿ ಬಳಿ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಸಚಿನ್ (29) ಅವರು ಮೃತಪಟ್ಟಿದ್ದು, ಸಂಬಂಧಿ ನೀರೀಕ್ಷ (14) ಗಂಭೀರ ಗಾಯಗೊಂಡಿದ್ದಾರೆ.


ಶಕ್ತಿನಗರದಿಂದ ಮಂಗಳಾದೇವಿಗೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಎದುರುಗಡೆಯಿಂದ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರ ಸಚಿನ್ ಹಾಗೂ ಸಹಸವಾರ ನಿರೀಕ್ಷ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು, ಈ ಸಂದರ್ಭ ಸಚಿನ್ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ನಿರೀಕ್ಷಾರಿಗೆ ಎಡ ಭುಜಕ್ಕೆ ಗಂಭೀರ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇನ್ನೊಂದು ಘಟನೆಯಲ್ಲಿ ಪಡೀಲ್ ಇಂಡಿಯನ್ ಪೆಟ್ರೋಲ್ ಪಂಪ್ ಎದುರು ಶುಕ್ರವಾರ ರಾತ್ರಿ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಸ್ಕೂಟರ್ ಸವಾರ ನಿಯಂತ್ರಣ ತಪ್ಪಿ ಲಾರಿಯಡಿಗೆ ಬಿದ್ದು ಮೃತಪಟ್ಟಿದ್ದಾರೆ.


ಜೋಸೆಫ್ ಕೆ.ಕೆ. (52) ಮೃತಪಟ್ಟವರು. ಮೊಹಮ್ಮದ್ ಅಲ್ಫಿಯಾನ್ ಅವರು ಟಿ.ಮೊಹಮ್ಮದ್ ಶಾಹೀರ್ ಅವರನ್ನು ಸಹಸವಾರರನ್ನಾಗಿಸಿ ಕುಳ್ಳಿರಿಸಿಕೊಂಡು ಪಂಪ್‌ವೆಲ್ ಕಡೆಯಿಂದ ಫರಂಗಿಫೇಟೆ ಕಡೆಗೆ ಹೋಗುತ್ತಿದ್ದಾಗ ಪಡೀಲ್ ಪೆಟ್ರೋಲ್ ಪಂಪ್ ಎದುರು ತಲುಪಿದಾಗ ಲಾರಿಯನ್ನು ಅದರ ಚಾಲಕ ಮಲ್ಲಿಕಾರ್ಜುನ ಆರ್. ಎಂಬಾತ ನಿರ್ಲಕ್ಷೃದಿಂದ ಎಡಕ್ಕೆ ತಿರುಗಿಸುತ್ತಿದ್ದ. ಈ ಸಂದರ್ಭ ಮೊಹಮ್ಮದ್ ಅಲ್ಫಿಯಾನ್ ಸ್ಕೂಟರ್ ವೇಗ ಕಡಿಮೆ ಮಾಡಿದ್ದು, ಹಿಂದಿನಿಂದ ಜೋಸೆಫ್ ಅವರು ಅತಿ ವೇಗವಾಗಿ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದಾರೆ. ಸ್ಕೂಟರ್‌ನಲ್ಲಿದ್ದ ಸಹ ಸವಾರ ಟಿ ಮೊಹಮ್ಮದ ಶಾಹೀರ್ ಅವರ ಎಡ ಕಾಲಿಗೆ ತಾಗಿಸಿ, ನಂತರ ಪರಂಗಿಪೇಟೆ ಕಡೆಗೆ ಹೋಗಲು ತಿರುಗಿಸುತ್ತಿದ್ದ ಲಾರಿಯ ಹಿಂದಿನ ಬಲ ಬದಿಯ ಚಕ್ರದ ಕೆಳಗೆ ಸ್ಕೂಟರ್ ಸಮೇಯ ಬಿದ್ದಿದ್ದಾರೆ. ಈ ಸಂದರ್ಭ ಲಾರಿಯ ಚಕ್ರವು ಸ್ಕೂಟರ್ ಸವಾರನ ಮೇಲೆ ಹತ್ತಿದೆ. ಪರಿಣಾಮ ಜೋಸೆಫ್ ಅವರ ಮುಖಕ್ಕೆ, ಎದೆಗೆ, ತಲೆಗೆ ಗಂಭೀರ ಸ್ವರೂಪದ ರಕ್ತ ಗಾಯ, ಬಲಗೈ ಮೂಳೆ ಮುರಿತದ ಗಾಯ ಮತ್ತು ಎಡ ಕೈ ತುಂಡಾಗಿದೆ. ತಕ್ಷಣ ಅವರನ್ನು ಆಂಬುಲೆನ್ಸ್‌ವೊಂದರಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿ ರಾತ್ರಿ 10 ಗಂಟೆಗೆ ಪರೀಕ್ಷಿಸಿದ ವೈದ್ಯರು ಜೋಸೆಫ್ ಕೆ.ಕೆ ರವರು ಆಸ್ಪತ್ರೆಗೆ ಕರೆ ತರುವ ಮೊದಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಅಪಘಾತದಿಂದ ಟಿ ಮೊಹಮ್ಮದ್ ಶಾಹೀರ್ ರವರ ಎಡಕಾಲಿಗೆ ರಕ್ತ ಗಾಯವಾಗಿದ್ದು, ಜನಪ್ರಿಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net