ರಸ್ತೆ ಅಪಘಾತ ಕೇರಳದ ಇಬ್ಬರು ವಿದ್ಯಾರ್ಥಿಗಳ ಮೃತ್ಯು

mng--8 April sankirth
Published on

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕುಂಟಿಕಾನ- ಕೆಪಿಟಿ ನಡುವೆ ಎಸ್‌ಕೆಎಸ್ ವೃತ್ತದಲ್ಲಿ ಮಂಗಳವಾರ ಬೆಳಗ್ಗಿನ ಜಾವ ಡಿವೈಡರ್‌ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಮೃತಪಟ್ಟು, ಇನ್ನೋರ್ವ ಗಾಯಗೊಂಡಿದ್ದಾನೆ.

ಕೇರಳ ಕೈಪಕುಲ್ಲತ್ತಿಲ್ ಪಲ್ಲೊತ್ತ್ ನಿವಾಸಿ ಧನುರ್ವೇದ್ (19), ಕೇರಳದ ಸಂಕೀರ್ತ್ (25) ಮೃತಪಟ್ಟವರು. ತಿರುವನಂತಪುರ ಪತ್ತಮಕ್ಕಲು ನಿವಾಸಿ ಸಿಬಿ ಸ್ಯಾಮ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಧನುರ್ವೇದ್ ನಗರದ ಕಾಲೇಜೊಂದರಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಓದುತ್ತಿದ್ದರೆ, ಸಂಕೀರ್ತ್ ಮತ್ತು ಸ್ಯಾಮ್ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು.

ಘಟನೆ ವಿವರ: ವಿದ್ಯಾರ್ಥಿಗಳು ಲೋಹಿತ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ದೂರುದಾರರಾದ ರೋಹಣ್ ಜೋಬಿ ಮತ್ತು ಮೇಘನಾಥ್ ಅವರು ಬೈಕ್ ಕೆಎಲ್ 13 ಎಎಚ್ 2388ನಲ್ಲಿ ಹಾಗೂ ಬೈಕ್ ಕೆಎಲ್ 58 ಕ್ಯೂ 6381ರಲ್ಲಿ ಸಂಕೀರ್ತ್ ಸವಾರನಾಗಿಧನುರ್ವೇದ್ ಮಧ್ಯದಲ್ಲಿ ಹಾಗೂ ಸಿಬಿ ಸ್ಯಾಮ್ 3ನೇ ವ್ಯಕ್ತಿಯಾಗಿ ಕುಳಿತು ಸಂಚರಿಸುತ್ತಿದ್ದರು. ಬೆಳಗ್ಗಿನ ಜಾವ 2.50ರ ವೇಳೆಗೆ ಸಂಕೀರ್ತನು ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಎಸ್‌ಕೆಎಸ್ ಜಂಕ್ಷನ್‌ನ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ಸಂದರ್ಭ ಬೈಕ್ ಸಮೇತ ಮೂವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸಂಕೀರ್ತ್ ಹಾಗೂ ಧನುವೇಧ್ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯದಲ್ಲಿ ಮೃತಪಟ್ಟಿದ್ದು, ಸಿಬಿ ಸ್ಯಾಮ್ ರವರಿಗೆ ಗದ್ದಕ್ಕೆ ತರಚಿದ ಗಾಯವಾಗಿದೆ. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net