ಹೆಚ್ಚಿನ ಬಡ್ಡಿಯ ಆಮಿಷ 55.81 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ನಗರದ ಬಲ್ಮಠದಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ಫಿಶ್ ಫಾರ್ಮರ್ಸ್ ವೆಲ್ ಫೇರ್ ಪ್ರೊಡ್ಯೂಸರ್ ಕಂಪನಿ ಸಾರ್ವಜನಿಕರಿಂದ 55,81,582 ರೂ.ಗಿಂತಲೂ ಅಧಿಕ ಠೇವಣಿ ಪಡೆದು, ಬಳಿಕ ಹಿಂತಿರುಗಿಸದೆ ವಂಚನೆ ಮಾಡಿದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವಂಚನೆಗೊಳಗಾದ ನೂರಕ್ಕೂ ಹೆಚ್ಚು ಮಂದಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮೂಲಕ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ನೀಡಿದ ಬೆನ್ನಲ್ಲೇ ವಂಚನೆಗೊಳಗಾದ ಆರ್.ಬಾಲಚಂದ್ರ ಅವರು ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ.
ಕೆಲವು ತಿಂಗಳುಗಳ ಹಿಂದೆ ಹೆಚ್ಚಿನ ಲಾಭ ಕೊಡಿಸುವುದಾಗಿ ಹೇಳಿ ಹಣ ಠೇವಣಿಯಿರಿಸಿ ಕೆನರಾ ಫಿಶ್ ಆಂಡ್ ಫಾರ್ಮರ್ಸ್ ಸಂಸ್ಥೆಯು ವಂಚಿಸಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರಾದ ರಾಹುಲ್ ಚಕ್ರಪಾಣಿ, ಆಡಳಿತ ನಿರ್ದೇಶಕರುಗಳಾದ ಸಿಂಧು ಚಕ್ರಪಾಣಿ, ಸಿಮಿ ಪಾರುತಿವಲಪ್ಪಿಲ್ ಶಾಜಿ ಅಲ್ ಡೂಸ್, ಸಂಗೀತ ಗೋಪಿ, ಅನಿಲ್ ಚಕ್ರಪಾಣಿ, ಮನೋಜ್ ಪಿ., ಹೇಮಂತ್ ಪ್ರದೀಪ್, ಪುತಿಯ ವಲಪ್ಪಿಲ್ ಶಾಜಿ, ವಲಿಯಾರ್ ಚೆರಿಯನ್ ನಿಕಿಲ್, ಅನಿಲ್ ಮಹನ್ ಎಂಬವರು ಹಾಗೂ ರೀಜನಲ್ ಮ್ಯಾನೇಜರ್ ಸಂತೋಷ್ ಕುಮಾರ್ ಮತ್ತು ಬ್ರಾಂಚ್ ಮ್ಯಾನೇಜರ್ ರವಿಚಂದ್ರ ಬಾಳೆಹೊಳೆ ಅವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.


ಪ್ರಕರಣದ ವಿವರ: ಬಲ್ಮಠದ ಲಕ್ಷ್ಮೀಕೃಷ್ಣ ಟವರ್ ಮೊದಲನೇ ಮಹಡಿಯಲ್ಲಿರುವ ಕೆನರಾ ಫಿಶ್ ಫಾರ್ಮರ್ಸ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಸಂತೋಷ್ ಕುಮಾರ್ ಮತ್ತು ಬ್ರಾಂಚ್ ಮ್ಯಾನೇಜರ್ ರವಿಚಂದ್ರ ಬಾಳೆಮೂಲೆ ಹಾಗೂ ಅವರ ತಂಡ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ.
ನಯವಾದ ಮಾತುಗಳಿಂದ, ತಮ್ಮ ಸಂಸ್ಥೆಯಲ್ಲಿ ಬೇರೆ ಸಂಸ್ಥೆಗಳಿಗಿಂತ ಹೆಚ್ಚು ಬಡ್ಡಿ ಮತ್ತು ವಿವಿಧ ರೀತಿಯ ಲಾಭಗಳನ್ನು ಕೊಡಿಸುವುದಾಗಿ ಆಮಿಷವೊಡ್ಡಿ ನಮ್ಮಿಂದ ಹಣ ಪಡೆದಿದ್ದಾರೆ. ಇದೀಗ ನಾವುಗಳು ಹೂಡಿದ ಹಣ ಹಿಂಪಡೆಯಲು ಬಲ್ಮಠದ ಕಚೇರಿಗೆ ಹೋದಾಗ ಸಂಸ್ಥೆಯು ಬಾಗಿಲು ಮುಚ್ಚಿದೆ. ಇದರಿಂದ ಆಘಾತಗೊಂಡು ನಾವು ಸಂತೋಷ್ ಕುಮಾರ್ ಮತ್ತು ರವಿಚಂದ್ರ ಬಾಳೆಮೂಲೆ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಿರುವುದಿಲ್ಲ. ಅವರ ಫೋನ್ ಗಳು ಸ್ವಿಚ್ ಆಫ್ ಆಗಿವೆ. ಹೀಗಾಗಿ ಹಣ ಹಿಂಪಡೆಯುವ ಭರವಸೆ ಕಳೆದು ಹೋಗಿದೆ. ನಾವು ವಂಚನೆಗೊಳಗಾಗಿದ್ದೇವೆ ಎಂದು ಅನಿಸತೊಡಗಿದೆ. ಈ ವ್ಯವಹಾರದಿಂದ ನಮ್ಮ ಕಷ್ಟಪಟ್ಟು ಕೂಡಿಟ್ಟ ಹಣ ಕಳೆದುಕೊಂಡಿದ್ದು, ನಮ್ಮ ಜೀವನ ಕಷ್ಟಕರವಾಗಿದೆ. ನಮ್ಮ ರೀತಿಯಲ್ಲಿ ಮಂಗಳೂರು ಹಾಗೂ ಉಡುಪಿಯಲ್ಲಿ ಸಾವಿರಾರು ಮಂದಿಯನ್ನು ಇವರು ವಂಚಿಸಿದ್ದಾರೆ ಎಂದು ಬಾಲಚಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net