ಮಂಗಳೂರು 1 ಕೆ.ಜಿ. 364 ಗ್ರಾಂ. ಗಾಂಜಾ ಸಮೇತ ಇಬ್ಬರ ಬಂಧನ

drugs
Published on

ಮಂಗಳೂರು: ದಂಬೆಲ್ ನದಿ ಕಿನಾರೆ ರಸ್ತೆಯ ಲ್ಗುಣಿ ಸೇತುವೆ ಬಳಿ ಗಾಂಜಾ ಹಿಡಿದುಕೊಂಡು ಬರುತ್ತಿದ್ದ ಇಬ್ಬರು ಯುವಕರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ರಾಜ್ಯದ ಪೂರ್ಣಿಯಾ ಹರಿಪುರ್ ಗ್ರಾಮದ ನಿವಾಸಿ, ಪ್ರಸ್ತುತ ಕೂಳೂರು ರಾಯಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕೃಷ್ಣ ಕುಮಾರ್ (20), ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಯಳವತ್ತಿ ಗ್ರಾಮ ನಿವಾಸಿ, ಪಡೀಲ್ ಕೊಡಕ್ಕಲ್‌ನಲ್ಲಿ ವಾಸವಾಗಿರುವ ಬಸಯ್ಯ ಶಂಕರಯ್ಯ ಮಠಪತಿ (23) ಬಂಧಿತ ಆರೋಪಿಗಳು.

ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಬರುತ್ತಿದ್ದ ಇಬ್ಬರು ಯುವಕರು ಪೊಲೀಸರನ್ನು ಕಂಡು ಓಡಿ ಹೋಗಲು ಯತ್ನಿಸಿದ್ದು, ಪೊಲೀಸರು ಬೆನ್ನಟ್ಟಿ ಹಿಡಿದಾಗ ಚೀಲದಲ್ಲಿ ಗಾಂಜಾ ಪತ್ತೆಯಾಗಿದೆ. ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಗಾಂಜಾವನ್ನು 3 ತಿಂಗಳ ಹಿಂದೆ ಕಡಿಮೆ ಹಣಕ್ಕೆ ಬಿಹಾರದ ವ್ಯಕ್ತಿಯೊಬ್ಬರಿಂದ ಖರೀದಿ ಮಾಡಿದ್ದು, ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿಸಿ ತಂದು ಗ್ರಾಹಕರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ.

ಆರೋಪಿಗಳಿಂದ ಸುಮಾರು 20,200 ರೂ. ಮೌಲ್ಯದ 1 ಕೆ.ಜಿ. 364 ಗ್ರಾಂ. ಗಾಂಜಾ, ಎರಡು ಮೊಬೈಲ್, 13 ಖಾಲಿ ಜಿಪ್ ಕವರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net