

ಮಂಗಳೂರು: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್ ಸಿಮ್ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿರುವ ಬಗ್ಗೆ ಆರೋಪಿಸಿ 1.71 ಕೋ.ರೂ. ವಂಚಿಸಿರುವ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.11ರಂದು ದೂರುದಾರರು ಮನೆಯಲ್ಲಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ಟ್ರಾಯ್ ಪ್ರತಿನಿಧಿ ಎಂದು ಕರೆ ಮಾಡಿದ್ದಾನೆ. ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದ್ದು, ಮುಂಬಯಿನ ಅಂಧೇರಿ (ಪೂರ್ವ)ದಲ್ಲಿ ಅದರ ಮೂಲಕ ಹಲವು ಕಾನೂನು ಬಾಹಿರ ಚಟುವಟಿಕೆ ನಡೆದಿವೆ. ಮಾರ್ಕೆಟಿಂಗ್ ನೆಪದಲ್ಲಿ ಆ ಮೊಬೈಲ್ ನಂಬರ್‌ನಿಂದ ಕರೆ ಮಾಡಿ ಕಿರುಕುಳ ನೀಡುತ್ತಿರುವ ಬಗ್ಗೆ ಎ್ಐಆರ್ ಆಗಿದೆ. ಕೂಡಲೇ ಅಂಧೇರಿ ಪೂರ್ವ ಠಾಣೆಯನ್ನು ಸಂಪರ್ಕಿಸಬೇಕು, ಇಲ್ಲಿದ್ದಲ್ಲಿ ನಿಮ್ಮ ಮೊಬೈಲ್ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾನೆ.
ಬಳಿಕ ಅಪರಿಚತ ವ್ಯಕ್ತಿ ಪ್ರದೀಪ್ ಸಾವಂತ್ ಎಂಬಾತನಲ್ಲಿ ದೂರುದಾರರು ಮಾತನಾಡಿದ್ದು, ನರೇಶ್ ಗೋಯೆಲ್ ವಂಚನೆ ಪ್ರಕರಣವನ್ನು ಒಳಗೊಂಡಿರುವ ಮನಿ ಲ್ಯಾಂಡರಿಂಗ್ ಯೋಜನೆಯಲ್ಲಿ ಭಾಗಿಯಾಗಿರುವುದರಿಂದ ಇನ್ನೊಂದು ಎ್ಐಆರ್ ದಾಖಲಾಗಿದೆ. ಅಂಧೇರಿಯ ಬ್ಯಾಂಕ್‌ನಲ್ಲಿ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದ್ದು, ಅದಕ್ಕೆ ಐಡೆಂಟಿಟಿ ಬಳಸಿ ಸಿಮ್ ಖರೀದಿಸಲಾಗಿದ್ದು, ಆ ಕಾರಣದಿಂದ ಬಂಧನ ಮಾಡಲಾಗುವುದು ಎಂದು ತಿಳಿಸಿದ್ದಾನೆ.
ಅನಂತರ ವಾಟ್ಸಾಪ್ ಮೂಲಕ ವೀಡಿಯೋ ಕರೆಯಲ್ಲಿ ರಾಹುಲ್ ಕುಮಾರ್ ಎಂಬಾತ ಪೊಲೀಸ್ ಅಧಿಕಾರಿ ಮತ್ತು ಆಕಾಂಕ್ಷ ಎನ್ನುವ ಮಹಿಳೆ ಸಿಬಿಐ ಅಧಿಕಾರಿಯೆಂದು ತಿಳಿಸಿ, ಸಿಬಿಐ ಕಚೇರಿಯ ನಕಲಿ ದಾಖಲೆ ಸೃಷ್ಟಿಸಿ ದೂರುದಾರರ ವಾಟ್ಸಾಪ್ ನಂಬರ್‌ಗೆ ಕಳುಹಿಸಿದ್ದಾರೆ. ಪ್ರಕರಣದಿಂದ ಮುಕ್ತಗೊಳ್ಳಬೇಕಾದರೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅದರಂತೆ ನ.13ರಿಂದ 19ರ ನಡುವೆ 53 ಲಕ್ಷ ರೂ., 74 ಲಕ್ಷ ರೂ. 44 ಲಕ್ಷ ರೂ. ಹೀಗೆ ಒಟ್ಟು 1.71 ಕೋ.ರೂ. ವರ್ಗಾಯಿಸಿ ಮೋಸ ಮಾಡಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.