ಗಮನ ಸೆಳೆದ ಮಂಗಳಮುಖಿಯರ ಕಲಾ ಪ್ರದರ್ಶನ

IMG_20230802_210706_868-1.jpg
Published on

ಹುಬ್ಬಳ್ಳಿ: ನವಶ್ರೀ ಕಲಾ ಚೇತನ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಬುಧವಾರ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಏರ್ಪಡಿಸಿದ್ದ ಮಂಗಳಮುಖಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು.

ಮಂಗಳಮುಖಿ ಕಲಾವಿದರು ಮರಾಠಿ, ಕನ್ನಡ, ಹಿಂದಿ ಹಾಡಿಗೆ ಭರ್ಜರಿ ನೃತ್ಯ ಮಾಡಿದರು. ಜೋಗತಿಪದ, ಡೋಲಕ್ ಹಾಗೂ ಸಿನಿಮಾ ಗೀತೆಗಳು ಪ್ರೇಕ್ಷಕರಿಗೆ ರಸದೌತಣ ನೀಡಿದವು.

ಸಂಗೀತಾ ಮತ್ತು ಪಲ್ಲವಿ ಅವರು ಪ್ರಸ್ತುತಪಡಿಸಿದ ಮರಾಠಿ ಹಾಡು ಹಾಗೂ ನೃತ್ಯ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿತು.

ಶಿವಾನಿ ತಂಡ, ನಾಗವೇಣಿ, ಶಖಿನಾ ನವಲಗುಂದ, ದುರ್ಗಾ, ಟಬು, ಮುಂತಾದವರು ತಮ್ಮಲ್ಲಿರುವ ಕಲೆ ಪ್ರದರ್ಶನ ನೀಡಿ, ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.

ಅತಿಥಿಯಾಗಿದ್ದ ಈಶ್ವರಿ ಫೌಂಡೇಷನ್ ಸಂಸ್ಥಾಪಕ ಸಂತೋಷ ವೆರ್ಣೇಕರ ಮಾತನಾಡಿ, ನವಶ್ರೀ ಕಲಾ ಚೇತನ ಸಂಸ್ಥೆಯು ಹಲವು ವರ್ಷಗಳಿಂದ ಕಲಾವಿದರನ್ನು ಪ್ರೋತ್ಸಾಹಿಸುತ್ತ ಬಂದಿದೆ. ಈ ವರ್ಷ ಮಂಗಳಮುಖಿಯರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವ ಮೂಲಕ ವಿಶೇಷತೆ ಮೆರೆದಿದ್ದಾರೆ. ಅವರನ್ನೂ ಸಮಾಜದ ಭಾಗವಾಗಿ ನೋಡುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯಮಿ ವಿಜಯ ಸೈಗಲ್ ಸಮಾರಂಭ ಉದ್ಘಾಟಿಸಿದರು. 15 ಜನ ಮಂಗಳಮುಖಿ ಸಾಧಕರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.

ನವಶ್ರೀ ಸಂಸ್ಥೆಯ ಅಧ್ಯೆ ಸಂಗೀತಾ ದೇವದಾಸ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಸಮಾಜ ಸೇವಕ ರಮೇಶ ಮಹಾದೇವಪ್ಪನವರ, ಉಪನಗರ ಠಾಣೆ ಪಿಎಸ್ಐ ಕವಿತಾ ಎಸ್., ಪುಷ್ಪಾ ಹಿರೇಮಠ, ಶಿವಪ್ರಸಾದ ದೇವದಾಸ, ಸ್ಮೀತಾ ಬಾಳಕೆ, ರೇಖಾ ಕಾಲವಾಡ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net