

ಭರತ್ ಶೆಟ್ಟಿಗಾರ್, ಮಂಗಳೂರು
ಬರ್ಡ್ ಕೌಂಟ್ ಇಂಡಿಯಾ, ಫೆ.12ರಿಂದ 15ರ ವರೆಗೆ ಜಾಗತಿಕ ಮಟ್ಟದ ‘ಗ್ರೇಟ್ ಬ್ಯಾಕ್‌ಯಾರ್ಡ್ ಬರ್ಡ್ ಕೌಂಟ್’ ಕಾರ್ಯಕ್ರಮದ ಭಾಗವಾಗಿ ದೇಶಾದ್ಯಂತ ‘ಕ್ಯಾಂಪಸ್ ಬರ್ಡ್ ಕೌಂಟ್’ ಆಯೋಜಿಸುತ್ತಿದೆ. ಈ ವಿಶೇಷ ಸ್ಪರ್ಧೆಯಲ್ಲಿ ಹಸಿರು ಕ್ಯಾಂಪಸ್ ಎಂದು ಹೆಸರು ಪಡೆದಿರುವ ಮಂಗಳೂರು ವಿಶ್ವವಿದ್ಯಾಲಯ ಸತತ ಆರನೇ ಬಾರಿಗೆ ಭಾಗವಹಿಸಲು ಸಿದ್ಧತೆ ನಡೆಸಿದೆ.
ದೇಶದ ಸಂರಕ್ಷಿತ ಅರಣ್ಯ ಪ್ರದೇಶಗಳ ಹೊರಗಿನ ಪಕ್ಷಿ ಸಂಕುಲಗಳನ್ನು ತಿಳಿದುಕೊಳ್ಳುವುದು, ಅವುಗಳನ್ನು ಡಾಕ್ಯುಮೆಂಟ್ ಮಾಡುವುದು, ಯುವ ಪಕ್ಷಿಪ್ರಿಯರಿಗೆ ಮಾಹಿತಿ ಒದಗಿಸುವುದು ಈ ಬರ್ಡ್‌ಕೌಂಟ್ ಉದ್ದೇಶ. ರಾಜ್ಯದಿಂದ ಈ ಬಾರಿ ಈವರೆಗೆ 4 ಸಂಸ್ಥೆಗಳು(ಬೆಂಗಳೂರು ಎಟ್ರೀ ಮತ್ತು ಕ್ರೈಸ್ಟ್ ವಿವಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾಲಯ) ನೋಂದಣಿ ಮಾಡಿಕೊಂಡಿವೆ.
ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ 300 ಎಕರೆ ವಿಸ್ತಾರವಾಗಿದ್ದು, ಇಲ್ಲಿ ಕಟ್ಟಡಗಳು ಮಾತ್ರವಲ್ಲದೆ, ಗಿಡ-ಮರಗಳನ್ನೊಳಗೊಂಡ ಹಸಿರು ವಾತಾವರಣವಿದೆ. ಈ ಬಾರಿ ಹಲವು ತಿಂಗಳು ವಾಹನ, ಜನರ ಓಡಾಟವಿಲ್ಲದೆ ಪ್ರಾಣಿ-ಪಕ್ಷಿಗಳು ಸ್ವಚ್ಛಂದ ಬದುಕಿನ ಆನಂದ ಅನುಭವಿಸಿವೆ. ಪ್ರಸ್ತುತ ಕ್ಯಾಂಪಸ್‌ನಲ್ಲಿ ಜನರ ಓಡಾಟ ಆರಂಭವಾಗಿದ್ದರೂ, ಹಿಂದಿನಂತಿಲ್ಲ. ಆದ್ದರಿಂದ ವಿವಿಧ ಜಾತಿಯ ಪಕ್ಷಿಗಳು ಕ್ಯಾಂಪಸ್‌ನಲ್ಲಿ ಕಾಣಸಿಗುವ ಸಾಧ್ಯತೆಯಿದೆ.
ದೇಶದಲ್ಲಿ ಎರಡನೇ ಸ್ಥಾನ ಪಡೆದಿದ್ದ ಮಂಗಳೂರು: 2018ರಲ್ಲಿ 110 ಜಾತಿ ಪಕ್ಷಿಗಳು ಪತ್ತೆಯಾಗುವ ಮೂಲಕ ಕ್ಯಾಂಪಸ್ ಬರ್ಡ್ ಕೌಂಟ್ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ದೇಶದಲ್ಲೇ 2ನೇ ಸ್ಥಾನ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿತ್ತು. ಹಿಂದಿನ ಮೂರು ವರ್ಷಗಳಲ್ಲಿ ಗಣತಿ ವೇಳೆ 100ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಪತ್ತೆಯಾಗಿದ್ದವು. ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಈ ಗಣತಿ ಕಾರ್ಯವನ್ನು ನಿರ್ವಹಿಸುತ್ತಿದ್ದು, ವಿಭಾಗದ ಚೇರ‌್ಮನ್ ಡಾ.ಶ್ರೀಪಾದ ಕೆ.ಎಸ್. ನಿರ್ದೇಶನ, ಸಂಶೋಧನಾ ವಿದ್ಯಾರ್ಥಿಗಳಾದ ವಿವೇಕ್ ಹಾಸ್ಯಗಾರ್ ಮತ್ತು ಮ್ಯಾಕ್ಸಿಂ ರಾಡ್ರಿಗಸ್ ನೇತೃತ್ವದಲ್ಲಿ ಬರ್ಡ್‌ಕೌಂಟ್ ನಡೆಯಲಿದೆ.
ಕ್ಯಾಂಪಸ್‌ನಲ್ಲಿ ಪತ್ತೆಯಾದ ಹಕ್ಕಿಗಳ ಸಂಖ್ಯೆ:
2016-77
2017-95
2018-110
2019-107
2020-103
ಕಾಣಸಿಕ್ಕ ಪಕ್ಷಿಗಳು: ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಬೂದು ಕಾಜಾಣ(ಆ್ಯಶೀ ಡ್ರಾಂಗೋ), ಬೂಟುಗಾಲಿನ ಗಿಡುಗ (ಬೂಟೆಡ್ ಈಗಲ್), ನವರಂಗ (ಇಂಡಿಯರ್ ಪಿಟ್ಟ) ಮೊದಲಾದ ವಲಸೆ ಹಕ್ಕಿಗಳು, ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕಂದು ತಲೆಯ ಬುಲ್‌ಬುಲ್, ರೂಫೋಸ್ ಬಬ್ಲರ್, ಕಂದು ಕಾಡು ಗೂಬೆ (ಬ್ರೌನ್ ವುಡ್ ಔಲ್), ಬಾರ್ನ್ ಔಲ್, ಸ್ಪಾಟೆಡ್ ಔಲೆಟ್, ಸವನ್ನಾ-ಭಾರತ ಮತ್ತು ಜೋರ್ಡನ್‌ನ ನೈಟ್‌ಜಾರ್ಸ್, ಅಪರೂಪದ ಶ್ರೀಲಂಕಾದ ಕಪ್ಪೆಬಾಯಿ (ಶ್ರೀಲಂಕನ್ ಫ್ರಾಗ್ ಮೌತ್) ಹಕ್ಕಿ, ನೀಲಿ ಕಿವಿಯ ಮಿಂಚುಳ್ಳಿ, ಕಪ್ಪು ಕಾಜಾಣ(ಬ್ಲಾೃಕ್ ಡ್ರೊಂಗೊ), ಗರುಡ (ಬ್ಲಾೃಕ್ ಕೈಟ್), ಬಿಳಿ ಗರುಡ (ಬ್ರಾಹ್ಮಿನಿ ಕೈಟ್), ಗ್ರೀನ್ ವಾರ್ಲ್ಬರ್, ಖಗರತ್ನ (ಪರ್ಪಲ್ ರಂಪ್‌ಡ್ ಸನ್ ಬರ್ಡ್) ಪಕ್ಷಿಗಳು ಹಿಂದಿನ ಅವಧಿಯಲ್ಲಿ ಕಾಣಸಿಕ್ಕಿವೆ.
ಹಿಂದಿನ ವರ್ಷಗಳಂತೆ ಈ ಬಾರಿಯೂ ವಿವಿ ಕ್ಯಾಂಪಸ್‌ನಲ್ಲಿ ಬರ್ಡ್ ಕೌಂಟ್ ಮಾಡಲಾವುದು. ಆಸಕ್ತ ವಿದ್ಯಾರ್ಥಿಗಳು ಈ ಗಣತಿಯಲ್ಲಿ ಭಾಗವಹಿಸಲಿದ್ದಾರೆ. ಕೋವಿಡ್ ಮಾರ್ಗಸೂಚಿ ಗಮನದಲ್ಲಿರಿಸಿ ಪಕ್ಷಿಗಳ ಪತ್ತೆ ಕಾರ್ಯ ನಡೆಸಲಾಗುವುದು. ಡಾ.ಶ್ರೀಪಾದ ಕೆ.ಎಸ್. ಚೇರ‌್ಮನ್, ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ, ಮಂಗಳೂರು ವಿವಿ