

ಮಂಡ್ಯ: ಒಂದು ಗಟ್ಟಿ ನಿರ್ಧಾರ ಮನುಷ್ಯನ ಬದುಕಿಗೆ ತಿರುವು ಕೊಡುತ್ತದೆ. ಆದರೆ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧವಾಗಿ ಪರಿಶ್ರಮ ವಹಿಸಬೇಕು ಎನ್ನುವುದು ಮುಖ್ಯ. ಅಂದು ಕೃಷಿಯಿಂದ ನಷ್ಟ ಅನುಭವಿಸಿದ ಕುಟುಂಬ, ಅನಿರೀಕ್ಷಿತವಾಗಿ ಹೈನುಗಾರಿಕೆಯತ್ತ ಮುಖ ಮಾಡಿತು. ಆದರೀಗ ಆ ಸಂಸಾರ ಬದುಕು ಕಟ್ಟಿಕೊಳ್ಳಲು ಗೋವುಗಳು ಆಧಾರವಾಗಿವೆ.
ಪಾಂಡವಪುರ ತಾಲೂಕು ಡಿಂಕಾ ಗ್ರಾಮದ ಮಂಗಳಮ್ಮ ಅವರ ಕುಟುಂಬ ಕಳೆದ 20 ವರ್ಷದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಕಮಾಲ್ ಮಾಡಿದೆ. ಜೀವನ ನಡೆಸಲು ಉದ್ಯೋಗ ಹರಸಿ ಪಟ್ಟಣದತ್ತ ವಲಸೆ ಹೋಗುವವರಿಗೆ ಮಾದರಿಯಾಗಿದ್ದಾರೆ. ಮುಖ್ಯವಾಗಿ ಹಳ್ಳಿಯಲ್ಲಿಯೇ ಶ್ರಮ ವಹಿಸಿ ದುಡಿದರೆ ನೆಮ್ಮದಿಯ ಬದುಕು ಕಂಡುಕೊಳ್ಳಬಹುದೆನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.
ಕೈ ಸುಟ್ಟಿತ್ತು ಕೃಷಿ: ಮಂಗಳಮ್ಮ ಮತ್ತು ಮಹದೇವಪ್ಪ ದಂಪತಿಗೆ ಸುಮಾರು ಎರಡು ಎಕರೆ ಜಮೀನಿದೆ. ಎಲ್ಲರಂತೆ ಭತ್ತ, ರಾಗಿ ಬೆಳೆಯುತ್ತಿದ್ದರು. ಆದರೆ ಅದ್ಯಾಕೋ ನಿರೀಕ್ಷೆಯಂತೆ ಕೃಷಿಯಲ್ಲಿ ಖುಷಿ ಕಾಣಲು ಸಾಧ್ಯವಾಗಲಿಲ್ಲ. ಮಾತ್ರವಲ್ಲದೆ ನಷ್ಟ ಅನುಭವಿಸುವಂತಾಯಿತು. ಒಂದೆಡೆ ಸಾಲ, ಮತ್ತೊಂದೆಡೆ ಜೀವನ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ. ಈ ಎಲ್ಲವನ್ನೂ ಆಲೋಚಿಸಿದ ದಂಪತಿ ತೆಗೆದುಕೊಂಡ ನಿರ್ಧಾರವೇ ಹೈನುಗಾರಿಕೆ.
20 ವರ್ಷದ ಹಿಂದೆ 12,750 ರೂ ಬಂಡವಾಳ ಹೂಡಿ ಹಸು ಖರೀದಿ ಮಾಡಿದರು. ಇದರೊಂದಿಗೆ ಕೃಷಿಯಿಂದ ಹೈನುಗಾರಿಕೆ ಕಡೆಗೆ ಹೆಜ್ಜೆ ಹಾಕಿದರು. ಪ್ರಾರಂಭದ ದಿನದಲ್ಲಿ ಅಡೆ ತಡೆ ಎದುರಾದರೂ ದಂಪತಿ ಅಂಜಲಿಲ್ಲ. ಬದಲಿಗೆ ಸಮಸ್ಯೆಗಳನ್ನೇ ಮೆಟ್ಟಿಲು ಮಾಡಿಕೊಂಡು ಗುರಿಯತ್ತ ಮುನ್ನಡೆದರು. ಪರಿಣಾಮ ವರ್ಷದಿಂದ ವರ್ಷಕ್ಕೆ ಹೈನುಗಾರಿಕೆ ಕೈ ಹಿಡಿಯಿತು. ದಂಪತಿಯ ಪರಿಶ್ರಮದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿಯೂ ಬದಲಾವಣೆ ಕಂಡಿತು. ಇಂದು ಎಚ್‌ಎಫ್ ಹಾಗೂ ಜರ್ಸಿ ತಳಿಯ 30 ಹಸುಗಳು, ಒಂದು ಎಮ್ಮೆ ಹಾಗೂ ನಾಲ್ಕು ಕರುಗಳಿವೆ.
ದಿನಕ್ಕೆ 300 ಲೀ. ಹಾಲು ಪೂರೈಕೆ
ಹೈನುಗಾರಿಕೆಯಿಂದ ಬಂದ ಹಣದಲ್ಲಿ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಮಗ ದಿಲೀಪ್ ಐಟಿಐ ಹಾಗೂ ಮಗಳು ಬಿಇ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಪ್ರಾರಂಭದ ದಿನದಲ್ಲಿ 15 ಹಸುಗಳಿದ್ದವು. ಆ ವೇಳೆ ಊರಿನೊಳಗಿರುವ ಮನೆಯಲ್ಲಿಯೇ ಇವುಗಳನ್ನು ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಹಂತ ಹಂತವಾಗಿ ಹಸುಗಳು ಸಂಖ್ಯೆ ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಫಾರ್ಮ್ ಹೌಸ್ ಕಟ್ಟಲಾಯಿತು.
ಹಸುಗಳ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೂಲಿಯಾಳುಗಳನ್ನು ಅವಲಂಬಿಸದ ಕುಟುಂಬ, ತಾವೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಹಾಲು ಕರೆಯಲು ಯಂತ್ರ, ಮೇವು ಕತ್ತರಿಸಲು ಯಂತ್ರಗಳನ್ನಿಟ್ಟುಕೊಂಡಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಸೇರಿ 300 ಲೀ, ಕೆಲವೊಮ್ಮೆ 320 ಲೀ.ಗೂ ಹೆಚ್ಚು ಹಾಲನ್ನು ಡಿಂಕಾ ಡೇರಿಗೆ ಪೂರೈಕೆ ಮಾಡುತ್ತಾರೆ. ಹೆಚ್ಚು ಕಡಿಮೆ ವಾರ್ಷಿಕ 1 ಲಕ್ಷ ಲೀಟರ್ ಹಾಲನ್ನು ಪೂರೈಕೆ ಮಾಡುವ ಕುಟುಂಬ, 30 ಲಕ್ಷ ರೂ.ನಷ್ಟ ವಹಿವಾಟು ನಡೆಸುತ್ತಾರೆ. ದಿನನಿತ್ಯ ಬೆಳಗ್ಗೆ, ಸಂಜೆ ಹಸುಗಳಿಗೆ ತಿಂಡಿ, ಮೇವು ಕೊಡುವುದು, ಸ್ವಚ್ಛ ಮಾಡುವ ಕಾಯಕ ಮಾಡುವ ಮಂಗಳಮ್ಮ ಕುಟುಂಬ, ಸಮಯದ ಹೊಂದಾಣಿಕೆ ಕಡೆಗೆ ಗಮನಹರಿಸುತ್ತಾರೆ. ಇದರಿಂದಲೇ ಕುಟುಂಬದವರೇ ಇಷ್ಟೊಂದು ಹಸುಗಳ ನಿರ್ವಹಣೆಯನ್ನು ಮಾಡುವಂತಾಗಿದೆ.
20 ವರ್ಷದಿಂದ ಇದೇ ನಮ್ಮ ಕಾಯಕ. ಹೈನುಗಾರಿಕೆಯಿಂದ ಬಂದ ಹಣದಲ್ಲಿ ಮಕ್ಕಳಿಗೆ ವ್ಯಾಸಂಗ ಮಾಡಿಸಿದ್ದೇವೆ. ಮುಖ್ಯವಾಗಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ. ಮಂಗಳಮ್ಮ ರೈತ ಮಹಿಳೆ ಸಿಗುವ ಅಲ್ಪ ಸಂಬಳಕ್ಕಾಗಿ ತಿಂಗಳು ಪೂರ್ತಿ ದುಡಿಯಲು ಹಾಗೂ ಊರು, ಪಾಲಕರನ್ನು ಬಿಟ್ಟು ಪಟ್ಟಣಕ್ಕೆ ಹೋದರೆ ಪ್ರಯೋಜನವಿಲ್ಲ. ಹಳ್ಳಿಯಲ್ಲಿಯೇ ಶಿಸ್ತು ಹೈನುಗಾರಿಕೆ ಮಾಡಿ ದುಡಿದರೂ ನೆಮ್ಮದಿ ಜೀವನ ಮಾಡಬಹುದು. ದಿಲೀಪ್ ಮಂಗಳಮ್ಮ ಅವರ ಮಗ