

ಮಂಗಳೂರು: ತುಳುವರಲ್ಲಿ ವಿಶಿಷ್ಟವಾದ ಆಚರಣೆಗಳಿವೆ. ಅವು ಈ ಮಣ್ಣಿನ ವಿಶೇಷತೆಗಳನ್ನು ಸಾರುತ್ತವೆ. ಕೆಲವೊಂದು ಶಬ್ದಗಳು,ಗಾದೆಗಳು ಇಲ್ಲಿನ ಬದುಕನ್ನು ತೆರೆದಿಡುತ್ತವೆ. ಇದನ್ನು ನಮ್ಮ ಮುಂದಿನ ಪೀಳಿಗೆ ತಿಳಿಯಬೇಕು. ಆಗ ಮಾತ್ರ ತುಳು ಜೀವನ ಪದ್ಧತಿ ಉಳಿದುಕೊಳ್ಳಲು ಸಾಧ್ಯ ಎಂದು ಬಿ.ಸಿ.ರೋಡ್ ನಲ್ಲಿರುವ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ತುಕಾರಾಂ ಪೂಜಾರಿ ಹೇಳಿದರು.
ತುಳುಕೂಟ ಕುಡ್ಲ ಮಂಗಳಾದೇವಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಸು ಪರ್ಬ ಸಂಭ್ರಮದಲ್ಲಿ ವಿಷುವಿನ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಿದರು.
ತುಳು ವಿದ್ವಾಂಸ ಮುದ್ದು ಮೂಡುಬೆಳ್ಳೆ ಅತಿಥಿಯಾಗಿದ್ದರು. ಕುಡ್ಲದ ಈ ತುಳುಕೂಟವು ಅನೇಕ ತುಳು ಸಂಘಟನೆಗಳಿಗೆ ತವರು ಮನೆಯಿದ್ದಂತೆ. ಬಿಸು ಪರ್ಬ ಆಚರಿಸುವ ಮೂಲಕ ಜಾಗೃತಿ ಉಂಟು ಮಾಡುತ್ತಿದೆ. ಅಪ್ರಕಟಿತ ತುಳು ನಾಟಕ ಸ್ಪರ್ಧೆಯನ್ನೂ ನಡೆಸುವುದಲ್ಲದೇ, ಬರಹಗಾರರ ಸಂಖ್ಯೆಯನ್ನೂ ವೃದ್ಧಿಸುತ್ತದೆ ಎಂದರು.
ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಮಾತನಾಡಿ, ಸುದೀರ್ಘ ಕಾಲದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ನೀಡುತ್ತಾ ಬರುತ್ತಿದೆ ಎಂದರು.
2025ರ ಸಾಲಿನ ವಿಜೇತರಾದ ಶಶಿರಾಜ್ ರಾವ್ ಕಾವೂರು (ಪ್ರ), ಅಕ್ಷತಾರಾಜ್ ಪೆರ್ಲ_ (ದ್ವಿ), ಗೀತಾ ನವೀನ್ ಅಂಚನ್_ (ತೃ) ಪ್ರಶಸ್ತಿಗಳನ್ನು ಪಡೆದರು.
ಇನ್ನು ಪ್ರೋತ್ಸಾಹಕರ ಪ್ರಶಸ್ತಿಯನ್ನು ಪ್ರಕಾಶ್ ಕುಮಾರ್ ಬಗಂಬಿಲ ಹಾಗೂ ವಿಲಾಸ್ ಕುಮಾರ್ ನಿಟ್ಟೆ ಪಡೆದುಕೊಂಡರು.
ರಘುರಾಮ ಉಪಾಧ್ಯಾಯರು ದೀಪ ಪ್ರಜ್ವಲಿಸಿ ಬಿಸುಪರ್ಬ ಉದ್ಘಾಟಿಸಿದರು. ತುಳುಕೂಟದ ಉಪಾಧ್ಯಕ್ಷ ಜೆ. ವಿ. ಶೆಟ್ಟಿ ಸ್ವಾಗತಿಸಿದರು. ಕಾಮಾಕ್ಷಿ ಸುಭಾಸ್ , ಚಂದ್ರಪ್ರಭಾ ದಿವಾಕರ್, ನಾರಾಯಣ ಬಿ.ಡಿ., ಭಾಸ್ಕರ ಕುಲಾಲ್ ಬರ್ಕೆ ಹಾಗೂ ಸುಖಾಲಾಕ್ಷಿ ವೈ ಸುವರ್ಣ ಅವರು ವಿಜೇತರನ್ನ ಪರಿಚಯಿಸಿದರು.
ಪ.್ರಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿ, ವಂದಿಸಿದರು.
ಜೊತೆ ಕಾರ್ಯದರ್ಶಿ ನಾಗೇಶ್ ದೇವಾಡಿಗ ಅವರ ನೇತೃತ್ವದಲ್ಲಿ ತುಳು ಹಾಡುಗಳು , ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.