

ಮಂಗಳೂರು: ಬೋಳಾರ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಸಂಭ್ರಮದ ರಥೋತ್ಸವ ಬುಧವಾರ ನಡೆಯಿತು.
ಪ್ರಾತಃಕಾಲ ಪೂಜೆ, ಗಣಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆಯಾಗಿ ದೇವರ ರಥಾರೋಹಣ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ರಥೋತ್ಸವ ಪ್ರಯುಕ್ತ ಬೆಳಗ್ಗಿನಿಂದಲೇ ಸಹಸ್ರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ದೇವಳವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸಾಯಂಕಾಲ ವಿಜೃಂಭಣೆಯ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಗಳಾದರು. ಬಳಿಕ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಭೂತ ಬಲಿ, ಕವಾಟ ಬಂಧನ, ಶಯನ ವಿಧಿವಿಧಾನಗಳು ನಡೆದವು. ಶ್ರೀ ಕ್ಷೇತ್ರದಲ್ಲಿ ಮಾ.11ರಿಂದ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೌಂದರ್ಯ ಲಹರಿ ಪಾರಾಯಣ, ಸ್ಯಾಕ್ಸೋಫೋನ್ ವಾದನ, ಕರ್ನಾಟಕ ಶಾಸ್ತ್ರೀಯ ಸಂಗೀತ ದ್ವಂದ್ವ ಗಾಯನ ನಡೆಯಿತು.
ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ, ಆಡಳಿತ ಮಂಡಳಿಯ ಟ್ರಸ್ಟಿಗಳಾದ ಬಿ.ರಾಮ ನಾಯ್ಕ ಕೋಟೆಕಾರು, ಪ್ರೇಮಲತಾ ಎಸ್.ಕುಮಾರ್, ಪ್ರಧಾನ ಅರ್ಚಕ ಎಂ.ಗಣೇಶ್ ಐತಾಳ್ ಮೊದಲಾದವರು ಉಪಸ್ಥಿತರಿದ್ದರು.