

| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಕಿತ್ತೂರು ಚನ್ನಮ್ಮಳ ನಾಡು ಬೆಳಗಾವಿ ಲೋಕಸಭಾ ಕ್ಷೇತ್ರದ 64 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಹಿಳೆಯೋರ್ವಳು ಸಂಸದೆಯಾಗಿ ಆಯ್ಕೆಯಾದ ದಾಖಲೆಗೆ ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ ಅಂಗಡಿ ಭಾಜನರಾಗಿದ್ದಾರೆ. ಅಲ್ಲದೆ, ಕ್ಷೇತ್ರದಲ್ಲಿ ದಾಖಲೆ ನಿರ್ವಿುಸಿದ್ದಾರೆ. 1957ರಿಂದ ಈವರೆಗೆ ನಡೆದ ಚುನಾವಣೆಗಳಲ್ಲಿ ಬೆಳಗಾವಿಯಿಂದ ಒಬ್ಬ ಮಹಿಳೆಯೂ ಆಯ್ಕೆಯಾಗಿರಲಿಲ್ಲ. ಈ ಉಪಚುನಾವಣೆಯಲ್ಲಿ ಮಂಗಲ ಅಂಗಡಿ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಅಂಗಡಿ ವಿರುದ್ಧ ಸೋತಿದ್ದ ಹೆಬ್ಬಾಳ್ಕರ್: 1957ರಿಂದ ಈವರೆಗೆ 18 ಚುನಾವಣೆಗಳಿಗೆ ಬೆಳಗಾವಿ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಿತ್ತು. ಈ ಚುನಾವಣೆಗಳಲ್ಲಿ ಸ್ಪರ್ಧಿಸಲು ಪುರುಷ ಅಭ್ಯರ್ಥಿಗಳಿಗೆ ಎಲ್ಲ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡುತ್ತ ಬಂದಿದ್ದವು. 2014ರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಬಿಜೆಪಿಯ ಸುರೇಶ ಅಂಗಡಿ ವಿರುದ್ಧ ಹೆಬ್ಬಾಳ್ಕರ್ 75,860 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಹಳೇ ಇತಿಹಾಸ ಮರು ಸೃಷ್ಟಿ: 1996ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಏಳು ಬಾರಿ ಕಾಂಗ್ರೆಸ್ ಐ ನಿಂದ ಆಯ್ಕೆಯಾಗಿದ್ದ ಬಿ.ಶಂಕರಾನಂದ ವಿರುದ್ಧ ರತ್ನಮಾಲಾ ಸವಣೂರ 1.12 ಲಕ್ಷ ಮತಗಳ ಅಂತರದಿಂದ ಗೆದ್ದು ರಾಜಕೀಯ ದಿಗ್ಗಜರನ್ನೆಲ್ಲ ರತ್ನಮಾಲಾ ಬೆರಗುಗೊಳಿಸಿದ್ದರು. ಅದೇ ಮಾದರಿಯಲ್ಲಿ 25 ವರ್ಷಗಳ ರಾಜಕೀಯ ಜೀವನದಲ್ಲಿ ಸೋಲನ್ನೇ ಕಾಣದ ಸತೀಶ ಜಾರಕಿಹೊಳಿಯನ್ನು ಬೆಳಗಾವಿಯಲ್ಲಿ ಸೋಲಿಸುವ ಮೂಲಕ ಮಂಗಲ ಅಂಗಡಿ ಹಳೇ ಇತಿಹಾಸ ಮರು ಸೃಷ್ಟಿಸಿದ್ದಾರೆ.
ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿ ಶಾಸಕರು ಸತತ ಗೆಲುವು ಸಾಧಿಸಿಕೊಂಡು ಬರುತ್ತಿದ್ದ ಸವದತ್ತಿ, ಅರಬಾಂವಿ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಗೊಳಿ 35 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ರಾಮದುರ್ಗ, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಕಾಂಗ್ರೆಸ್ 15 ಸಾವಿರ ಮತಗಳಿಸಿದೆ. ಬೆಳಗಾವಿ ಗ್ರಾಮೀಣ, ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿ ತಡೆ ನೀಡಿದರು. ಇದರಿಂದ ಈ ಕ್ಷೇತ್ರದಲ್ಲಿ ಬಿಜೆಪಿಗೆ 24 ಸಾವಿರ ಮತಗಳ ಹಿನ್ನಡೆ ಅನುಭವಿಸಬೇಕಾಯಿತು.
ಕೈಕೊಟ್ಟ ಕಾಂಗ್ರೆಸ್ ನಾಯಕರು: ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಮುನ್ನಲೆಗೆ ಬಾರದಂತೆ ಎರಡು ಪಕ್ಷಗಳ ನಾಯಕರು ಜಾಗರೂಕತೆ ವಹಿಸಿದ್ದರು. ಕಾಂಗ್ರೆಸ್ ನಾಯಕರು ಗೋಕಾಕ, ಬೆಳಗಾವಿ ದಕ್ಷಿಣ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಿಲ್ಲ. ಅಲ್ಲದೆ, ಗೋಕಾಕ ಕ್ಷೇತ್ರದಲ್ಲಿ ಹೆಚ್ಚಿನ ಮತ ಗಳಿಸುವ ಆತ್ಮವಿಶ್ವಾಸದಲ್ಲಿ ಸತೀಶ ಮತದಾರರ ಬಳಿ ಹೋಗಿರಲಿಲ್ಲ. ಯಾವ ನಾಯಕರೂ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರಲಿಲ್ಲ. ಹಾಲಿ ಮತ್ತು ಮಾಜಿ ಶಾಸಕರು ತಮ್ಮ ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಿಲ್ಲ. ಪರಿಣಾಮ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳೂ ಬಿಜೆಪಿ ಪಾಲಾಯಿತು.
ಬಿಜೆಪಿ ಗೌರವ ಉಳಿಸಿದ ರಮೇಶ: ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿ ಮತ್ತು 2ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಗೌರವ ಕಾಪಾಡಿದ್ದು ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ಕ್ಷೇತ್ರ. ಇಲ್ಲಿ 27,909 ಮತಗಳು ಮತ್ತು ಶಾಸಕ ಅಭಯ ಪಾಟೀಲ ಪ್ರತಿನಿಧಿಸುವ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 22,957 ಮತಗಳ ಮುನ್ನಡೆ ಕೊಡಿಸುವ ಮೂಲಕ ಬಿಜೆಪಿ ಗೌರವ ಉಳಿಸಿದಿದ್ದಾರೆ. ಈ ಕ್ಷೇತ್ರದಲ್ಲಿ ಸ್ವಲ್ಪ ಕಾಂಗ್ರೆಸ್ ಪ್ರಯತ್ನಿಸಿದ್ದರೆ ಬಿಜೆಪಿಗೆ ಗೆಲುವು ಕಷ್ಟವಾಗಲಿತ್ತು.