ಮುಂದುವರಿಯಲಿ ಪುಸ್ತಕ ಓದುವ ಸಂಸ್ಕೃತಿ...

UDP-2-3-Granthalaya
Published on

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆಶಯ

125ನೇ 'ಮನೆಯೇ ಗ್ರಂಥಾಲಯ' ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಡಿಜಿಟಲ್​ ಮಾಧ್ಯಮಗಳಿಂದಾಗಿ ಇಂದು ಪುಸ್ತಕ ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕೈಯಲ್ಲಿ ಪುಸ್ತಕ ಹಿಡಿದು ಓದುವಾಗ ಲಭಿಸುವ ಸಂತಸ ಮೊಬೈಲ್​ ನೋಡಿ ಓದುವಾಗ ಲಭಿಸದು. ಯುವ ಸಮುದಾಯ ಸೇರಿದಂತೆ ಎಲ್ಲ ವಯೋಮಾನದವರೂ ಸಹ ಪುಸ್ತಕ ಓದುವ ಮೂಲಕ ಸಂಸ್ಕೃತಿ ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆಶಯ ವ್ಯಕ್ತಪಡಿಸಿದರು.

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ನ 'ಮನೆಯೇ ಗ್ರಂಥಾಲಯ' ಅಭಿಯಾನದ 125ನೇ ಕೇಂದ್ರವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿ, ಜಿಲ್ಲಾಡಳಿತದಲ್ಲಿ ಎಲ್ಲ ಇಲಾಖೆ ಇರುವುದರಿಂದ ಸದ್ಯ ಸ್ಥಳಾವಕಾಶದ ಕೊರತೆ ಇದೆ. ಮುಂದಿನ ದಿನಗಳಲ್ಲಿ ಗ್ರಂಥಾಲಯಕ್ಕಾಗಿಯೇ ಒಂದು ಕೊಠಡಿ ಮೀಸಲಿಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಸೇವೆಗೆ ಲಭಿಸಿದ ಅವಕಾಶ

Last Photo
ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್​ ಎಚ್​.ಪಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಘಟಕದ ಎಲ್ಲ ಉತ್ಸಾಹಿ ಪದಾಧಿಕಾರಿಗಳ ಸಹಕಾರದಲ್ಲಿ ಕನ್ನಡದ ಸೇವೆಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಮಣಿಪಾಲ ರೇಡಿಯೋದಲ್ಲಿ 'ಕಥೆ ಕೇಳೋಣ' ಸರಣಿ, ಎಲ್ಲರೂ ಪುಸ್ತಕ ಓದುವಂತಾಗಬೇಕು ಎಂದು 'ಮನೆಯೇ ಗ್ರಂಥಾಲಯ' ಅಭಿಯಾನ ಕೈಗೊಂಡಿದ್ದೇವೆ. ಕನ್ನಡಕ್ಕಾಗಿ ಹಾಗೂ ಕನ್ನಡಾಂಬೆಯ ಸೇವೆಗೆ ಲಭಿಸಿದ ಅವಕಾಶದ ಸದುಪಯೋಗ ಮಾಡುತ್ತಿದ್ದೇವೆ. ಈ ಅಭಿಯಾನಕ್ಕೆ ಜನರಿಂದ ಅದ್ಭುತವಾದ ಸಹಕಾರ, ಸ್ವಂದನೆ ಲಭಿಸುತ್ತಿದೆ. ಕನ್ನಡದ ಸಂಸ್ಕೃತಿ ಉಳಿಸಲು ಎಲ್ಲರೂ ಶ್ರಮಿಸೋಣ ಎಂದರು.

ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರ

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಡಿಸಿ ಕಚೇರಿಯ ಗ್ರಂಥಾಲಯಕ್ಕಾಗಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸಿ, ಶುಭ ಕೋರಿದರು. ಅನೇಕ ಸಾಹಿತಿಗಳು ಗ್ರಂಥಾಲಯಕ್ಕೆ ತಮ್ಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.

Set-2

ಉಡುಪಿ ನಗರ ಗ್ರಂಥಾಲಯದ ಮುಖ್ಯಸ್ಥೆ ನಳಿನಿ, ಕಸಾಪ ಘಟಕದ ಗೌರವ ಕಾರ್ಯದರ್ಶಿ ರಂಜಿನಿ ವಸಂತ್​, ಜಾಲತಾಣ ಸಂಚಾಲಕ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಗೌರವ ಕೋಶಾಧಿಕಾರಿ ರಾಜೇಶ್​ ಭಟ್​ ಪಣಿಯಾಡಿ, ಸಂಘಟನಾ ಕಾರ್ಯದರ್ಶಿ ಸತೀಶ್​ ಕೊಡವೂರು, ಜಿಲ್ಲಾ ಸಹಕಾರ್ಯದರ್ಶಿ ಮೋಹನ್​ ಉಡುಪ ಹಂದಾಡಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಉಡುಪಿ ವಿಶ್ವನಾಥ ಶೆಣ್ಣೆ, ಪದಾಧಿಕಾರಿಗಳಾದ ಪ್ರೊ.ಶಂಕರ್​, ಕಿರಣ್​ ಮಂಜನಬೈಲು, ನಾಗರಾಜ್​ ಹೆಬ್ಬಾರ್​, ಪ್ರಭಾಕರ್​ ಪೂಜಾರಿ ಇತರರು ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

ಕಸಾಪ ಉಡುಪಿ ಘಟಕದ ಕಾರ್ಯ ಶ್ಲಾಘನೀಯ

Set-1
ಪುಸ್ತಕ ಓದಿ ಎಂದು ಸಲಹೆ ಕೊಟ್ಟರೆ ಸಾಲದು. ಪುಸ್ತಕ ಓದುವಂತಹ ವ್ಯವಸ್ಥೆ, ವಾತಾವರಣ ಕಲ್ಪಿಸಿದರೆ ಮಾತ್ರ ಓದುವ ಸಂಸ್ಕೃತಿ ಮುಂದುವರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಉಡುಪಿ ಕಸಾಪ 'ಮನೆಯೇ ಗ್ರಂಥಾಲಯ' ಅಭಿಯಾನದ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ. ಗ್ರಂಥಾಲಯ ತೆರೆಯುವ ಮೂಲಕ ಜನರಿಗೆ ಓದುವ ಮನಸ್ಥಿತಿ ಸೃಷ್ಟಿಸುತ್ತಿದ್ದಾರೆ. ಅವರ ಈ ಕೆಲಸ ನಿಜಕ್ಕೂ ಶ್ಲಾಘನೀಯ ಮತ್ತು ಮಾದರಿಯಾಗಿದೆ. ಜಿಲ್ಲಾಡಳಿತಕ್ಕೆ ನಿತ್ಯವೂ ನೂರಾರು ಜನರು ಕೆಲಸದ ನಿಮಿತ್ತ ಆಗಮಿಸುತ್ತಾರೆ. ಕೆಲವೊಮ್ಮೆ ಡಿಸಿ ಭೇಟಿಯಾಗಲು ವಿಳಂಬವಾಗುವ ಸಾಧ್ಯತೆಯೂ ಇರುತ್ತದೆ. ಈ ಸಂದರ್ಭದಲ್ಲಿ ಅವರು ಖಾಲಿ ಕುಳಿತುಕೊಳ್ಳುವ ಬದಲು ಇಲ್ಲಿನ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕದಿಂದ ಒಂದೆರಡು ಪುಟ ಓದಿದರೂ ಸಹ ಸಮಯದ ಸದುಪಯೋಗ ಆಗುತ್ತದೆ. ಜಿಲ್ಲಾಡಳಿತದ ಕಚೇರಿಯಲ್ಲಿ ಗ್ರಂಥಾಲಯ ತೆರೆದಿರುವುದು ನಿಜಕ್ಕೂ ಸೂಕ್ತ ಮತ್ತು ಅರ್ಥಪೂರ್ಣವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸಂತಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net