

ಬೆಂಗಳೂರು: ಏಪ್ರಿಲ್ ಅಥವಾ ಮೇನಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಈ ವಾರ ಹತ್ತು ದಿನದಲ್ಲಿ ಮಹತ್ವದ ಕಸರತ್ತು ನಡೆಸಲಿವೆ.
ಸಚಿವರ ಮೂಲಕ ಸಂಭಾವ್ಯ ಹೆಸರುಗಳ ಪಟ್ಟಿ ತರಿಸಿಕೊಂಡಿರುವ ಕಾಂಗ್ರೆಸ್, ಯಾರೆಲ್ಲ ಬೆಸ್ಟ್, ಬಿಜೆಪಿ ಅಭ್ಯರ್ಥಿಗೆ ಪೈಪೋಟಿ ನೀಡಲು ಸಾಧ್ಯವಾಗುವವರು ಯಾರೆಂಬುದನ್ನು ಖಾಸಗಿ ಸಂಸ್ಥೆಗಳ ಮೂಲಕ ಪರೀಕ್ಷೆಗೆ ಒಳಪಡಿಸುವ ಕಾರ್ಯ ಆರಂಭಿಸಿದೆ.
ಇನ್ನೊಂದೆಡೆ ಬಿಜೆಪಿಯೂ ಹಾಲಿ ಸಂಸದರನ್ನು ಎಲ್ಲಿ ಮುಂದುವರಿಸಬೇಕು? ಎಲ್ಲಿ ಬದಲಿಸಬೇಕಾಗಬಹುದು? ಎಂಬ ಮಾಹಿತಿ ಸಂಗ್ರಹಿಸಿ, ಎರಡನೇ ಸುತ್ತಿನಲ್ಲಿ ಬದಲಾವಣೆ ಮಾಡಬೇಕಾದ ಕ್ಷೇತ್ರಗಳಲ್ಲಿ ಸಂಭಾವ್ಯರನ್ನು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮದೇ ನೆಟ್ವರ್ಕ್ನಲ್ಲಿ ಪರ್ಯಾಯ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಿದ್ದು, ಒಂದೊಮ್ಮೆ ವರಿಷ್ಠರು ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಬಯಸಿದ ಸಂದರ್ಭದಲ್ಲಿ ತಡಬಡಾಯಿಸಬಾರದೆಂಬ ಮುಂದಾಲೋಚನೆಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ.
ಪರ್ಯಾಯ ಆಯ್ಕೆ ಪಟ್ಟಿಯಲ್ಲಿ ಹಾಲಿ ಶಾಸಕರು, ಮಾಜಿ ಸಚಿವರು, ಸಮಾಜದ ವಿವಿಧ ಕ್ಷೇತ್ರದ ಗಣ್ಯರ ಹೆಸರೂ ಇವೆ. ಈ ಬಾರಿ ಅಚ್ಚರಿ ಅಭ್ಯರ್ಥಿ ಪ್ರಯೋಗ ಬೇಡ ಎಂಬ ಅಭಿಪ್ರಾಯ ಪಕ್ಷದಲ್ಲಿರುವ ಕಾರಣ, ಅನಿವಾರ್ಯವಾಗಿ ಅಭ್ಯರ್ಥಿ ಬದಲಿಸಬೇಕಾದ ಕಡೆ ಜಾತಿ ಸಮೀಕರಣ, ಪ್ರಭಾವಿತನ ಪರಿಗಣಿಸಿ ಅಲ್ಲಿನ ಪಕ್ಷದ ಚಿರಪರಿಚಿತ ಪ್ರಮುಖರಿಗೆ ಅವಕಾಶ ನೀಡಲು ಬಯಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಮತ್ತು ಕಾಂಗ್ರೆಸ್ ಫೆಬ್ರವರಿ ಮೊದಲ ವಾರ ಅಥವಾ ಮಧ್ಯ ಭಾಗದಲ್ಲಿ ಭಾಗಶಃ ಈ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿವೆ. ಕಾಂಗ್ರೆಸ್ನ ಸಂಭಾವ್ಯ ಪಟ್ಟಿ ದೆಹಲಿಯಲ್ಲಿ ನಡೆಯುವ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಅಂತಿಮಗೊಳ್ಳಲಿದೆ.
ಬಿಜೆಪಿಯಲ್ಲಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಷಾ ಬೆಂಗಳೂರಿಗೆ ಆಗಮಿಸಿ ಅಂತಿಮಗೊಳಿಸುವರು. ಕೊನೆಯಲ್ಲಿ ಎರಡೂ ಪಕ್ಷಗಳ ಕೇಂದ್ರೀಯ ಚುನಾವಣೆ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಗೆ ಅಂಗೀಕಾರ ನೀಡಲಾಗುತ್ತದೆ. ಈ ಕಾರ್ಯ ಫೆಬ್ರವರಿ 25ರ ಬಳಿಕ ನಡೆಯುವ ಅಂದಾಜಿದೆ.
ಸಮಾವೇಶಗಳ ಮಾಸ: ಲೋಕಸಭಾ ಚುನಾವಣೆಯಲ್ಲಿ ಜನರ ಮನ ಗೆಲ್ಲಲು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಫಲಾನುಭವಿಗಳ ಸಮಾವೇಶ ಸಂಘಟಿಸಲು ಹೊರಟಿವೆ. ಎರಡೂ ಪಕ್ಷಗಳ ಸಮಾವೇಶ ಫೆಬ್ರವರಿಯಲ್ಲಿ ನಡೆಯಲಿವೆ. ಬಿಜೆಪಿಯು ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದವರ ಸಮಾವೇಶ ನಡೆಸಿದರೆ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಆಯೋಜಿಸುತ್ತಿದೆ. ಬಿಜೆಪಿಯು ಒಂದು ಹೆಜ್ಜೆ ಮುಂದೆ ಹೋಗಿ ಫಲಾನುಭವಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಅವರೊಂದಿಗೆ ರ್ಚಚಿಸುವ ಕಾರ್ಯಕ್ಕೂ ಕೈಹಾಕಿದೆ. ಫೆ.12ರಿಂದ ವಿಧಾನಸಭೆ ಅಧಿವೇಶನ ನಡೆಯಲಿದ್ದ್ದು, ಅಷ್ಟರೊಳಗೆ ಒಂದು ಹಂತದಲ್ಲಿ ವಿಧಾನಸಭೆ ಕ್ಷೇತ್ರವಾರು ಸಮಾವೇಶ ಸಂಘಟಿಸಬೇಕೆಂದು ಶಾಸಕರಿಗೆ ಸೂಚನೆ ನೀಡಲಾಗಿದೆ. ಸಾಧ್ಯವಾಗದಿದ್ದಲ್ಲಿ, ಫೆಬ್ರವರಿ ಅಂತ್ಯದೊಳಗಾದರೂ ಆಯೋಜನೆ ಮಾಡಲೇಬೇಕೆಂದು ತಿಳಿಸಲಾಗಿದೆ.
ಬಿಜೆಪಿಯವರು ಏನು ಮಾಡುತ್ತಿದ್ದಾರೆ? ವಿಜಯೇಂದ್ರ ಏನು ಮಾಡುತ್ತಿದ್ದಾರೆ? ಎಂಬ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಅಲ್ಲದೆ ಬಿಜೆಪಿ ಯವರಿಗೂ ನಮಗೂ ಹೋಲಿಕೆ ಮಾಡಬೇಡಿ. ನಮ್ಮ ಕೆಲಸ ನಾವು ಮಾಡುತ್ತೇವೆ. ಈಗಾಗಲೆ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇವೆ.
| ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಮಂಡ್ಯ ಪಕ್ಷೇತರ ಸಂಸದೆಯನ್ನು ಬಿಜೆಪಿಗೆ ಸೇರಿಸಿಕೊಳ್ಳುವ ವಿಚಾರ ಚರ್ಚೆಯಲ್ಲಿದೆ. ಹಾಗಾಗಿ ಮಂಡ್ಯ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಇನ್ನೂ ಅಂತಿಮವಾಗಿಲ್ಲ.
| ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ