

ಹುಬ್ಬಳ್ಳಿ : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯ ಮತ್ತು ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ತೀವ್ರ ಹಾನಿಗೊಳಗಾದ ಮನೆಗಳಿಗೆ ಕೇಂದ್ರ ಸರ್ಕಾರದ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮಾರ್ಗಸೂಚಿಯಡಿ ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಪ್ರಲ್ಹಾದ ಜೋಶಿ, ಇತ್ತೀಚೆಗೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆ ಬಿದ್ದು, ಚಿಕ್ಕ ಮಕ್ಕಳ ಸಹಿತ ಮೂವರು ಸಾವಿಗೀಡಾಗಿದ್ದಾರೆ. ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿ ಅತಿವೃಷ್ಠಿಯಿಂದಾಗಿ ನೊಂದ ಸಂತ್ರಸ್ಥರಿಗೆ ಸಾಂತ್ವಾನದ ಜತೆಗೆ ಅವರ ಮನೆಗಳ ಪುನರ್ ನಿರ್ಮಾಣ ಅಥವಾ ದುರಸ್ಥಿ ಕಾರ್ಯಕ್ಕೆ ಪರಿಹಾರ ಧನ ನೀಡುವಂತೆ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಪರಿಹಾರವನ್ನು 2021 ರಿಂದ 2023 ರವರೆಗೂ ರಾಜ್ಯ ಸರ್ಕಾರದಿಂದ ನೆರೆಪೀಡಿತರಿಗೆ ಪಾವತಿಸುತ್ತ ಬಂದಿದೆ. ಆದರೆ, 2024 ರ ಅವಧಿಗೆ ಈ ಆದೇಶವನ್ನು ಮುಂದುವರೆಸಲು ಇದುವರೆಗೂ ರಾಜ್ಯ ಸರ್ಕಾರದಿಂದ ಆದೇಶವಾಗಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಹಾನಿಗೊಳಗಾದ ಫಲಾನುಭವಿಗಳ ಮನೆಗಳ ಪುನರ್ ನಿರ್ಮಾಣ ಅಥವಾ ದುರಸ್ಥಿ ಕಾರ್ಯ ಕೈಗೊಳ್ಳಲು ವಿಳಂಬವುಂಟಾಗಿ, ತೊಂದರೆಗೊಳಗಾಗಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.
ರಾಜ್ಯದೆಲ್ಲೆಡೆ ಮತ್ತೆ ಪ್ರವಾಹ ರೀತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಅವಾಂತರಗಳೂ ಆಗಿವೆ. ಕೆರೆಕಟ್ಟೆಗಳಿರುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲು ಸಂಬಂಧಿಸಿದ ಅಧಿಕಾರಿಗಳು ಕೇಂದ್ರ ಸ್ಥಳಗಳಲ್ಲಿದ್ದು, ಪರಿಸ್ಥಿತಿ ಸರಿಪಡಿಸಲು ಸೂಚನೆ ನೀಡಬೇಕು. ಮಳೆ ಹಾನಿ ಪರಿಹಾರ ನೀಡಲು ಹಿಂದೆ ಮುಂದೆ ನೋಡಬಾರದು ಎಂದು ಒತ್ತಾಯಿಸಿದ್ದಾರೆ.
ಅನೇಕ ಕಡೆ ವಿದ್ಯುತ್ ಕಂಬಗಳು ಬಿದ್ದು, ಪರಿಕರಗಳು ಹಾಳಾಗಿರುವ ಘಟನೆ ವರದಿಯಾಗಿದೆ. ವಿದ್ಯುತ್ ಕಂಬಗಳನ್ನು ಕೂಡಲೇ ಸರಿಪಡಿಸಿ, ಪರಿಕರಗಳ ದುರಸ್ತಿಗೊಳಿಸುವಂತೆ ಇಲಾಖೆಗೆ ಸೂಚನೆ ನೀಡುವುದರ ಜೊತೆಗೆ ಜಲಾವೃತ ಪ್ರದೇಶಗಳಲ್ಲಿನ ಜನರಿಗೆ ಆಶ್ರಯ ನೀಡಲು ಮುಖ್ಯಮಂತ್ರಿ ಅವರನ್ನು ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.