

ಶಿವರಾಜ ಎಂ. ಬೆಂಗಳೂರು
ಎಷ್ಟು ವರ್ಷದಿಂದ ಅಲೆದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಅಧಿಕಾರಿಗಳು ಕಾಣಲು ಸಿಗುವುದಿಲ್ಲ. ಜಿಲ್ಲಾಡಳಿತವೇನು ಕಣ್ಮುಚ್ಚಿ ಕುಳಿತಿದೆಯೇ? ಹೀಗೆ ಜಿಲ್ಲಾಡಳಿತದ ಬಗ್ಗೆ ತರಹೇವಾರಿ ಆರೋಪಗಳು ಸಾಮಾನ್ಯ. ಇಂಥ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತವೇ ಮನೆಬಾಗಿಲಿಗೆ ಬಂದು ಸಮಸ್ಯೆ ಆಲಿಸಿದರೆ...!
ಹೌದು. ಗ್ರಾಮಾಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ‘ಜಿಲ್ಲಾಧಿಕಾರಿಗಳ ಗ್ರಾಮಭೇಟಿ’ಗೆ ವೇದಿಕೆ ಸಿದ್ಧವಾಗುತ್ತಿದೆ. ಎಲ್ಲ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಕುಂದುಕೊರತೆ ನಿವಾರಣೆಗೆ ವಿಶೇಷ ಪ್ರಯತ್ನ ನಡೆಸುವ ಯೋಜನೆಯೊಂದು ರೂಪುರೇಷೆ ಪಡೆಯುತ್ತಿದೆ. ಅಧಿಕಾರಿಗಳು, ಸಾರ್ವಜನಿಕರನ್ನು ಮುಖಾಮುಖಿಗೊಳಿಸಿ ಸಮಸ್ಯೆಗಳನ್ನು ಹತ್ತಿರದಿಂದಲೇ ತಿಳಿಯುವ ಪ್ರಯತ್ನವಾಗಿ ಈ ಕಾರ್ಯಕ್ರಮ ರೂಪುಗೊಳ್ಳುತ್ತಿದೆ. ಇದಕ್ಕಾಗಿಯೇ ಅಧಿಕಾರಿಗಳ ತಂಡದೊಂದಿಗೆ ಡಿಸಿ ಅವರು, ಪೂರ್ವಭಾವಿ ಸಭೆ ನಡೆಸಲಿದ್ದು, ಗ್ರಾಮಭೇಟಿಗೂ ಮುನ್ನವೇ ಗ್ರಾಮದ ಜನಸಂಖ್ಯೆ, ಅಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಪೂರ್ವ ಮಾಹಿತಿ ಪಟ್ಟಿ ಸಿದ್ಧಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಕಂದಾಯಕ್ಕೆ ಒತ್ತು: ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಒತ್ತು ನೀಡುವ ಬಗ್ಗೆ ಜಿಲ್ಲಾಧಿಕಾರಿ ಚಿಂತಿಸಿದ್ದಾರೆ. ಇದರ ಜತೆಗೆ ಸ್ಮಶಾನಭೂಮಿ ಹಂಚಿಕೆ, ಆರ್‌ಟಿಸಿ ತಿದ್ದುಪಡಿ, ಪೌತಿಖಾತೆ, ಪಿಂಚಣಿ ಯೋಜನೆ ಸೇರಿ ಮತ್ತಿತರ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಗ್ರಾಮಕ್ಕೆ ಭೇಟಿ ನೀಡುವ ಕೆಲ ದಿನ ಮುನ್ನವೇ ಸಾರ್ವಜನಿಕರಿಗೆ ಮಾಹಿತಿ ರವಾನಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಗಡಿಭಾಗದ ಗ್ರಾಮಗಳಿಗೆ ಆದ್ಯತೆ: ಗಡಿಭಾಗದ ಗ್ರಾಮಗಳ ಪಟ್ಟಿಯನ್ನು ಆದ್ಯತೆ ಮೇರೆಗೆ ಸಿದ್ಧಪಡಿಸಿದ್ದು, ಜಿಲ್ಲಾ ಕೇಂದ್ರದ ಹತ್ತಿರವಿರುವ ಗ್ರಾಮಗಳಿಗೆ ಎರಡನೇ ಹಂತದಲ್ಲಿ ಭೇಟಿ ನೀಡಲು ಸಿದ್ಧತೆ ನಡೆದಿದೆ. ಗಡಿಗ್ರಾಮಗಳನ್ನು ಪ್ರಥಮ ಹಂತದಲ್ಲಿ ಗುರುತಿಸಲಾಗಿದೆ.
ಸಚಿವರ ಸೂಚನೆ: ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಗಣರಾಜ್ಯೋತ್ಸವದಂದು ಹಾಗೂ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ 10 ಸಾವಿರ ಮಂದಿಗೆ ಹಕ್ಕುಪತ್ರ ವಿತರಣೆ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳು ಖುದ್ದು ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ಮುಖ್ಯವಾಗಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂಬ ವಿಷಯ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಯೋಜನೆ ಕಾರ್ಯರೂಪಕ್ಕೆ ತರಲು ಸಿದ್ಧತೆ ನಡೆಯುತ್ತಿದೆ.
ಅಧಿಕಾರಿಗಳ ತಂಡದೊಂದಿಗೆ ಖುದ್ದು ಗ್ರಾಮಗಳಿಗೆ ಭೇಟಿ ನೀಡಿ ಜನರ ಕುಂದುಕೊರತೆ ನಿವಾರಿಸುವ ನಿಟ್ಟಿನಲ್ಲಿ ಗ್ರಾಮಭೇಟಿ ಕಾರ್ಯಕ್ರಮ ರೂಪಿಸಲಾಗಿದೆ. ಗಡಿಗ್ರಾಮಗಳನ್ನು ಪ್ರಮುಖವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ ಜಿಲ್ಲೆ