

ಧಾರವಾಡ: ಕರ್ನಾಟಕ ಪೊಲೀಸ್ ಜನಸ್ನೇಹಿ ಆಗಿದ್ದು ಸಮುದಾಯ ವ್ಯವಸ್ಥೆಯನ್ನು ಬಲಪಡಿಸಿ, ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ವಿನೂತನವಾಗಿ ಜಿಲ್ಲೆಯಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಜಾರಿ
ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹೇಳಿದರು.
ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಮನೆಮನೆಗೆ ಭೇಟಿ ನೀಡಿ, ಸಾರ್ವಜನಿಕರಿಗೆ ನೂತನ ಕಾರ್ಯಕ್ರಮದ ಪರಿಚಯ ನೀಡಿ ಮತ್ತು ಅಹವಾಲು ಆಲಿಸಿ ಅವರು ಮಾತನಾಡಿದರು.
ಈಗಾಗಲೇ ಬೀಟ್ ಪೊಲೀಸ್ ವ್ಯವಸ್ಥೆ ಮೂಲಕ ಸಮುದಾಯ, ಜನರೊಂದಿಗೆ ನೇರ ಸಂಪರ್ಕ ಸಾಧಿಸಿ, ಇಲಾಖೆ ಜನಸ್ನೆಹಿ ಆಗಿದೆ. ಮನೆಮನೆಗೆ ಪೊಲೀಸ್ ಮೂಲಕ ಜನರ ಮನೆ ಬಾಗಿಲಿಗೆ ಬಂದು, ಬೀಟ್ ಪೊಲೀಸ್ ಸಿಬ್ಬಂದಿ ಸಮಸ್ಯೆಗಳನ್ನು ಆಲಿಸಿ, ದಾಖಲಿಸಲಿದ್ದಾರೆ. ಸಾಧ್ಯವಾದಷ್ಟು ಸ್ಥಳೀಯವಾಗಿ ಕಾನೂನು ಪ್ರಕಾರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ಅಥವಾ ಸಂಬಂಧಿಸಿದವರ ಗಮನಕ್ಕೆ ತರುವ ಕೆಲಸ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಪೊಲೀಸರು ಕೇವಲ ಅಪರಾಧ ನಡೆದಾಗ ಸ್ಥಳಕ್ಕೆ ಬರುವ ಬದಲು, ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಪರಾಧ ತಡೆಯುವುದು ಮತ್ತು ಜನರಲ್ಲಿ ಸುರಕ್ಷತಾ ಭಾವನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ವಹಿಸಿದೆ ಎಂದರು.
ಪೊಲೀಸ್ ಅಪ್ಲಿಕೇಶನ್‌ಗಳನ್ನು ಜನಸಾಮಾನ್ಯರು ಬಳಸಬೇಕು. ಇದರಲ್ಲಿ ಪೊಲೀಸರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸಕ್ರಿಯ ನಾಗರಿಕರಿದ್ದು, ಈ ಗುಂಪಿನಲ್ಲಿ ಅಧಿಕತ ಮಾಹಿತಿ ನೀಡಿ ಸುರತಾ ಎಚ್ಚರಿಕೆಗಳು ಮತ್ತು ಸಂಚಾರದ ಅಪ್ ಡೇಟ್ ಗಳನ್ನು ಹಂಚಿಕೊಳ್ಳಬಹುದು ಎಂದರು.
ಗ್ರಾಮದ ಹಿರಿಯರಾದ ಸಹದೇವ ಹಾವೇರಿ, ಚನಬಸಪ್ಪ ಮಟ್ಟಿ ಅವರು ಮಾತನಾಡಿದರು.
ಡಿವೈಎಸ್ಪಿ ವಿನೋದ ಮುಕ್ತೆದಾರ, ಹೆಬ್ಬಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ವಿಠ್ಠಲ ಬೋವಿ, ಉಪಾಧ್ಯಕ್ಷೆ ಸುಶಿಲಮ್ಮ ಸಾಲಿ ಇದ್ದರು.
ಧಾರವಾಡ ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಮಲ್ಲಯ್ಯ ನಂದಿಕೋಲಮಠ ಕಾರ್ಯಕ್ರಮ ನಿರೂಪಿಸಿದರು.
ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಅಂಗವಾಗಿ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಹೆಬ್ಬಳ್ಳಿ ಗ್ರಾಮದ ಹಳೇ ಬಸ್ ನಿಲ್ದಾಣ ಹತ್ತಿರದ ಓಣಿ, ಮಲ್ಲಯ್ಯನಗುಡಿ ಓಣಿ, ಕಾಮನಗುಡಿ ಓಣಿ, ಹರಿಜನಕೇರಿ, ಚಲವಾದಿಯವರ ಓಣಿ ಇತರ ಪ್ರದೇಶಗಳಲ್ಲಿ ಸಂಚರಿಸಿ, ಸಾರ್ವಜನಿಕರನ್ನು ಮಾತನಾಡಿಸಿದರು.