

ಕಾರಟಗಿ: ಪಟ್ಟಣದ 11ನೇ ವಾರ್ಡ್ ಕೋಟೆ ಬಡಾವಣೆಯಲ್ಲಿ ಗ್ರಾಮದೇವತೆ ದ್ಯಾವಮ್ಮ ದೇವಸ್ಥಾನ ನಿರ್ಮಾಣಕ್ಕಾಗಿ ನಡೆದ ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಅಧಿಕಾರಿಗಳು ಬಡವರ ಬದುಕಿಗೆ ಬರೆ ಎಳೆದು, ಬಲಾಢ್ಯರಿಗೆ ಮಣೆ ಹಾಕುತ್ತಿದ್ದಾರೆ.
ಸಚಿವ ಶಿವರಾಜ ತಂಗಡಗಿ ಇಲ್ಲಿನ ಸಂತ್ರಸ್ತರಿಗೆ ಬೇರೆಡೆ ಜಾಗ ಗುರುತಿಸಿದ ಬಳಿಕ ತೆರವುಕಾರ್ಯ ನಡೆಸುವಂತೆ ತಹಸೀಲ್ದಾರ್ ಎಂ.ಕುಮಾರಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್‌ಗೆ ಸೂಚಿಸಿದ್ದರು. ಊರಿನ ಹಿರಿಯರ ಆಶಯದಂತೆ ದೇವಿಯ ಹೊಸ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದ್ದು, ಸುತ್ತಲಿದ್ದ ಗುಡಿಸಲು-ಶೆಡ್ ನಿವಾಸಿಗಳ ಒಪ್ಪಿಗೆಯಿಂದ ಯುಗಾದಿ ಬಳಿಕ ಬೇರೆಕಡೆ ತೆರಳಬೇಕೆಂದಿದ್ದರು. ಅದಕ್ಕೆ 20ಕ್ಕೂ ಅಧಿಕ ಕುಟುಂಬಗಳು ಸಮ್ಮತಿಸಿದ್ದವು. ಲೋಕಸಭಾ ಚುನಾವಣೆ ನೀತಿಸಂಹಿತೆಯಿಂದ ಮೂರು ತಿಂಗಳು ತೆರವು ಕಾರ್ಯ ಮುಂದೂಡಲಾಗಿತ್ತು.
2024 ಜೂ.26ರಂದು ಪುರಸಭೆ ಅಧಿಕಾರಿಗಳು ಬಡವರ ಶೆಡ್-ಗುಡಿಸಲುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದರು. ದೇವಸ್ಥಾನ ಸುತ್ತಲಿನ ಜಾಗವನ್ನು ನಿಷ್ಪಕ್ಷಪಾತವಾಗಿ ಸರ್ವೇ ನಡೆಸಬೇಕಿದ್ದ ಅಧಿಕಾರಿಗಳು ಕೆಲವರು ತೋರಿಸಿದ ಗುಡಿಸಲುಗಳು, ಮನೆಗಳು, ಶೆಡ್‌ಗಳನ್ನಷ್ಟೇ ತೆರವುಗೊಳಿಸಿ ಅಮಾನವೀಯತೆ ಮೆರೆದಿದ್ದಾರೆ. ಕೆಲ ಪ್ರಭಾವಿಗಳು ಮತ್ತು ಅವರ ಬೆಂಬಲಿಗರೆಂದು ಹೇಳುವವರ ಮನೆಗಳನ್ನು ಇಂದಿಗೂ ತೆರವುಗೊಳಿಸದೆ ಹಾಗೇ ಉಳಿಸಲಾಗಿದೆ.
ಬಲಾಢ್ಯರ ಮನೆಗಳನ್ನು ತೆರವುಗೊಳಿಸದೆ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪುರಸಭೆ ಅಧಿಕಾರಿಗಳು ಅವರಿಗೆ ನೋಟಿಸ್ ನೀಡಿ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಹೇಳಿ ಕೈತೊಳೆದುಕೊಂಡಿದ್ದಾರೆ. ಸರ್ಕಾರಿ ಜಾಗದಲ್ಲಿ ವಾಸಿಸುವವರಿಗೆ ನೋಟಿಸ್ ನೀಡುವ ಅಗತ್ಯವಿಲ್ಲವೆಂದು ಅಧಿಕಾರಿಗಳು ವಾದಿಸುತ್ತಿದ್ದಾರೆ. ಹಾಗಾದರೆ ಗ್ರಾಮದೇವತೆ ದ್ಯಾವಮ್ಮದೇವಿ ದೇವಸ್ಥಾನ ಸುತ್ತಲೂ ದೇವಸ್ಥಾನಕ್ಕೆ ಸೇರಿದ ಸಮಗ್ರ ಜಾಗವನ್ನು ಸರ್ವೇ ನಡೆಸಿ ವಶಪಡಿಸಿಕೊಳ್ಳಲು ಮುಂದಾಗಲಿ.
28 ಜನ ಸಂತ್ರಸ್ತರೆನ್ನುವ ಪಟ್ಟಿ ಪುರಸಭೆಯಲ್ಲಿದ್ದು, ಅದರಲ್ಲಿ ನಮೂದಾದವರ ಮನೆಗಳನ್ನು ತೆರವುಗೊಳಿಸಿಲ್ಲ. ವಾಸ್ತವದಲ್ಲಿ ಆ ಪಟ್ಟಿ ಸಿದ್ಧಪಡಿಸಿದವರು, ಬಲಾಢ್ಯರ ಮನೆಗಳು ತೆರವಾಗದಂತೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವವರು ಯಾರೆಂಬುದು ಸಾರ್ವಜನಿಕರಿಗೆ ಗೊತ್ತಿದೆ. ಬಡವರ ಬದುಕಿಗೆ ಬರೆ ಎಳೆದು ಬಲಾಢ್ಯರಿಗೆ ಅಧಿಕಾರಿಗಳು ಮಣೆ ಹಾಕುತ್ತಿರುವ ಹಿಂದಿನ ಉದ್ದೇಶವೇನು ?
ಜೂ.26ರಂದು ಬಡವರ ಶೆಡ್, ಗುಡಿಸಲುಗಳಲ್ಲಿನ ಸಾಮಗ್ರಿಗಳನ್ನು ತೆಗೆದುಕೊಳ್ಳಲೂ ಅವಕಾಶ ಕಲ್ಪಿಸದೆ ತರಾತುರಿಯಲ್ಲಿ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳು ಕೆಲವು ಬಲಾಢ್ಯರಿಗೆ ಜೂ.27ರಂದು ಮನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ನೋಟಿಸ್ ಸಿದ್ಧಪಡಿಸಿದ್ದಾರೆ. ಅವರಿಗೆ ತಲುಪಿಸಿದ್ದು ಮಾತ್ರ ಜೂ.29ಕ್ಕೆ. ಮೂರು ದಿನಗಳಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿ 15 ದಿನಗಳು ಕಳೆದಿವೆ. ಪುರಸಭೆ ಅಧಿಕಾರಿಗಳು ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುವ ಜತೆಗೆ ಬಲಾಢ್ಯರಿಗೆ ನೋಟಿಸ್ ನೀಡಿ ನುಣಿಚಿಕೊಳ್ಳುವ ನಾಟಕವಾಡುತ್ತಿದ್ದಾರೆ.
ಬಡವರಿಗೊಂದು.. ಬಲಾಢ್ಯರಿಗೊಂದು ನ್ಯಾಯವನ್ನು ಒಪ್ಪುವುದಿಲ್ಲ. ದೇವಸ್ಥಾನವೂ ಆಗಬೇಕು, ಬಡವರಿಗೆ ನಿವೇಶನವೂ ಸಿಗಬೇಕು. ಬಾಕಿ ಉಳಿದವುಗಳನ್ನು ತೆರವುಗೊಳಿಸದಿದ್ದರೆ ಪುರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು.ಮರಿಯಪ್ಪ ಸಾಲೋಣಿರೈತ ಮುಖಂಡ ಕಾರಟಗಿ