ಮಠಾಧೀಶರಿಗೆ ವಿವಾಹ ನಿಷೇಧ ನಿಸರ್ಗ ತತ್ವಕ್ಕೆ ವಿರೋಧ : ಅಲ್ಲಮಪ್ರಭು ಬೆಟ್ಟದೂರು

New Project (9)
Published on

ಬೆಂಗಳೂರು: ಸಮಾಜದ ಸಂಪತ್ತಾಗಿರುವ ಮಠಗಳು ಒಬ್ಬ ವ್ಯಕ್ತಿಗೆ ಸೇರಿ ಹೋಗುತ್ತದೆ ಎಂಬ ಕಾರಣಕ್ಕೆ ಸ್ವಾಮಿಗಳು, ಜಂಗಮರನ್ನು ವಿವಾಹದಿಂದ ವಂಚಿತರನ್ನಾಗಿ ಮಾಡಲಾಗಿದೆ. ಇದು ಸರಿಯಲ್ಲ ಎಂದು ಸಾಮಾಜಿಕ ಚಿಂತಕ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಠಾಧೀಶರಿಗೆ ವಿವಾಹ ನಿಷೇಧ ಮಾಡಿರುವುದು ನಿಸರ್ಗ ತತ್ವಕ್ಕೆ ವಿರುದ್ಧವಾದದ್ದಾಗಿದೆ ಎಂದ ಅವರು, ಬಸವಣ್ಣ ಅವರ ಕಾಲದಲ್ಲಿ ಅವಿವಾಹಿತರು ಮಠಾಧೀಶರಾಗಿರಲಿಲ್ಲ. ವಿವಾಹಿತರೇ ಮಠಾಧೀಶರಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ‘‘ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು... ’ ಎಂದು ಬಸವಣ್ಣನವರ ವಚನವನ್ನು ಉದಾಹರಣೆ ನೀಡಿದರು.

ಅದೇ ರೀತಿ ಅಂಬಿಗರ ಚೌಡಯ್ಯನ ವಚನದಲ್ಲಿ ಮಠಮಾನ್ಯಗಳ ಬಗ್ಗೆ ಕಠುವಾದ ಟೀಕಿಸಲಾಗಿದೆ. ಆದ್ದರಿಂದ ಇವುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿರಕ್ತ ಮಠಗಳು ಹೆಚ್ಚಿದ್ದು, ಸಾಂಸಾರಿಕ ಮಠಗಳ ಸಂಖ್ಯೆ ಕಡಿಮೆ. ಮಠಮಾನ್ಯಗಳು ಸಾಮಾಜಿಕ ಬದುಕಿನಲ್ಲಿ ಏನು ನಡೆಯುತ್ತಿದೆ? ಯಾವುದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಆಗ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಶಿಕ್ಷಣ ವ್ಯವಸ್ಥೆಯಲ್ಲಿ ದೋಷ: ಶಿಕ್ಷಣ ವ್ಯವಸ್ಥೆಯಲ್ಲಿಯೂ ಹಲವು ದೋಷಗಳಿವೆ. ಯುಜಿಸಿ ಪ್ರಾಧ್ಯಾಪಕರಿಗೆ ಲಕ್ಷಾಂತರ ರೂಪಾಯಿ ನೀಡಲಾಗುತ್ತಿದೆ. ಗೌರವ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರೆಂದು ಕರೆಸಿಕೊಂಡು, ಪಾಠ ಮಾಡುವವರಿಗೆ ಸರಿಯಾದ ವೇತನವಿಲ್ಲ. ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಅವರು, ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡುತ್ತಾರೆ? ಈ ಬಗ್ಗೆ ಹೋರಾಟಗಳು ನಡೆಸಿದ ಬಳಿಕ ವೇತನದಲ್ಲಿ ಸ್ವಲ್ಪ ಏರಿಕೆಕಂಡಿತು. ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ನಮ್ಮದೇ ಸರ್ಕಾರ ಅಂದುಕೊಳ್ಳಬೇಕು. ಕವಿಗಳು, ಬರಹಗಾರರು ವಿರೋಧ ಪಕ್ಷದ ರೀತಿ ಇರಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net