

ಮದ್ದೂರು: ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಸಂಬಂಧ ಮಂಡ್ಯ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ವತಿಯಿಂದ ತಾಲೂಕಿನ ನಿಡಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುರಕ್ಷಿತ್ ಬಚ್ಪನ್ ಅಭಿಯಾನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾನೂನು ನೆರವು ಅರೆಕಾಲಿಕ ಸ್ವಯಂ ಸೇವಕ ಸಿ.ಶ್ರೀಧರ್ ಮಾತನಾಡಿ, ಬಾಲ್ಯ ವಿವಾಹ ಅಪರಾಧವಾಗಿದ್ದು, ಕಾನೂನಿನಡಿ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಸುರಕ್ಷಿತ ಸ್ಪರ್ಶ ಹಾಗೂ ಅಸುರಕ್ಷಿತ ಸ್ಪರ್ಶಗಳ ಬಗ್ಗೆ ಅರಿವು ಹೊಂದುವುದು ಅತ್ಯಗತ್ಯ ಎಂದರು.
9ನೇ ತರಗತಿ ವಿದ್ಯಾರ್ಥಿನಿ ಮೇದಿನಿ ಮಾತನಾಡಿ, ವಿದ್ಯಾರ್ಥಿನಿಯರು ಜೀವನದಲ್ಲಿ ಎಚ್ಚರಿಕೆಯಿಂದ ಇರಬೇಕು. ಹೆಣ್ಣು ಮಕ್ಕಳ ಜೀವನ ಸೂಕ್ಷ್ಮ, ಗಾಜಿನ ಲೋಟದಂತೆ. ಬಾಲ್ಯ ವಿವಾಹ ತಡಗಟ್ಟುವ ಮತ್ತು ದುಷ್ಪರಿಣಾಮ ಕುರಿತು ಪಾಲಕರು ಹಾಗೂ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು. ಪೋಕ್ಸೋ ಕಾಯ್ದೆ-2012 ಹೆಣ್ಣು ಮಕ್ಕಳ ರಕ್ಷಣೆಗೆ ಸಹಕಾರಿ ಎಂದರು.
ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯಕ್ಕೊಳಗಾದಾಗ ಅನುಸರಿಸಬೇಕಾದ ಕ್ರಮ ಮತ್ತು ಕಾಯ್ದೆ ಕುರಿತು ಶಿಕ್ಷಕಿ ತರನಂಬಾನು ಮಾಹಿತಿ ನೀಡಿದರು.
ಶಾಲೆ ಮುಖ್ಯ ಶಿಕ್ಷಕಿ ಬಿ.ವಿ.ಸುಧಾ ಮಾತನಾಡಿ, ಲೈಂಗಿಕ ಶೋಷಣೆ, ಕಿರುಕುಳ ಎದುರಾದಾಗ ಹೆಣ್ಣು ಮಕ್ಕಳು ಅದನ್ನು ವಿರೋಧಿಸಬೇಕು. ಕೆಲವು ಸಂದರ್ಭದಲ್ಲಿ ಸಂಬಂಧಿಕರು, ಅಪರಿಚಿತರು, ಸ್ನೇಹಿತರಿಂದ ಶೋಷಣೆಗೊಳಗಾಗುವ ಸಾಧ್ಯತೆಯಿದ್ದು, ಅಂತಹ ಸಂದರ್ಭದಲ್ಲಿ ಮಾಹಿತಿ ಆಧಾರದ ಮೇಲೆ ರಕ್ಷಣೆ ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಅನಿತಾ, ಮಮತಾ, ತರನುಂಬಾನು, ರಾಜೇಶ್, ಸಮೀಕ್ಷಾ ಇತರರಿದ್ದರು.