

ಹಲಗೂರು: ಇಲ್ಲಿನ ನಾಡಕಚೇರಿಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಆಚರಿಸಲಾಯಿತು.
ಉಪ ತಹಸೀಲ್ದಾರ್ ಕೆ.ನಟರಾಜ್ ಮಹನೀಯರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ, ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಬಡವರ ಬಾದಾಮಿ ಕಡಲೆಬೀಜ ಮತ್ತು ಬೆಲ್ಲದಲ್ಲಿ ಪೌಷ್ಟಿಕಾಂಶ ಇರುತ್ತದೆ ಎಂಬ ಉದ್ದೇಶದಿಂದ ಗಾಂಧಿ ಯಾವಾಗಲೂ ಸೇವಿಸುತ್ತಿದ್ದರು ಎಂದು ಸ್ಮರಿಸಿದರು.
ಗಾಂಧಿ ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರೃ ತಂದುಕೊಡಲು ಮುಂದಾಳತ್ವ ವಹಿಸಿದ್ದರು. ಸ್ವಚ್ಛತೆಗಾಗಿ ಹೆಚ್ಚು ಮಹತ್ವ ನೀಡಿದ್ದರು. ಅಂತೆಯೇ ಶಾಸ್ತ್ರಿ ಕೂಡ ಸ್ವಾತಂತ್ರೃಕ್ಕಾಗಿ ಹೋರಾಡಿದವರು. ಸ್ವಾತಂತ್ರೃ ನಂತರ ದೇಶದ ಎರಡನೇ ಪ್ರಧಾನಿಯಾಗಿ ದೇಶವನ್ನು ಅಚ್ಚುಕಟ್ಟಾಗಿ ಮುನ್ನಡೆಸಿದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ರಾಜಸ್ವ ನಿರೀಕ್ಷಕ ಪ್ರವೀಣ್‌ಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ಸೋಮಣ್ಣ, ಲತಾ, ಸಿದ್ದರಾಯಿ ಮಾಳಿ, ಗ್ರಾಮ ಸಹಾಯಕರಾದ ಮಹದೇವಸ್ವಾಮಿ, ಶಿವಪ್ರಕಾಶ್, ಪುಟ್ಟಸ್ವಾಮಿ, ನಂದನ್, ನಂಜುಂಡ, ಕನಕ, ಗೌರಮ್ಮ, ನವೀನ್ ಇತರರು ಇದ್ದರು.