ಸಾಸಲು ಜಾತ್ರೆಗೆ ಸಕಲ ಸಿದ್ಧತೆ ಜರೂರಾಗಲಿ

ಅಧಿಕಾರಿಗಳಿಗೆ ಶಾಸಕ ಎಚ್.ಟಿ.ಮಂಜು ಸೂಚನೆ
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಕಾರ್ತಿಕ ಮಾಸದ ಜಾತ್ರೆೆ ಪೂರ್ವಭಾವಿ ಸಭೆ ಶಾಸಕ ಎಚ್.ಟಿ. ಮಂಜು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಶ್ರೇಯಸ್, ಸುಷ್ಮಾ, ವೀಣಾ, ಜಯರಾಂ ಮತ್ತಿತರರಿದ್ದರು.
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಕಾರ್ತಿಕ ಮಾಸದ ಜಾತ್ರೆೆ ಪೂರ್ವಭಾವಿ ಸಭೆ ಶಾಸಕ ಎಚ್.ಟಿ. ಮಂಜು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಶ್ರೇಯಸ್, ಸುಷ್ಮಾ, ವೀಣಾ, ಜಯರಾಂ ಮತ್ತಿತರರಿದ್ದರು.
Published on: 

ಕಿಕ್ಕೇರಿ: ಹೋಬಳಿಯ ಸಾಸಲು ಕ್ಷೇತ್ರದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲ ಬಯಲು ಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂದು ಪ್ರಸಿದ್ಧಿ ಹೊಂದಿದ್ದು, ಕಾರ್ತಿಕ ಮಾಸದಲ್ಲಿ ಜರುಗಲಿರುವ ಜಾತ್ರೆಗೆ ಮೂಲಸೌಕರ್ಯದ ಸಮಸ್ಯೆ ಕಾಡದಂತೆ ಎಚ್ಚರಿಕೆ ವಹಿಸಿ ಎಂದು ಶಾಸಕ ಎಚ್.ಟಿ. ಮಂಜು ಸೂಚಿಸಿದರು.

ಮಂಗಳವಾರ ಜಾತ್ರೆ ವಿಶೇಷ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾರ್ತಿಕ ಮಾಸದಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ದೇಗುಲಕ್ಕೆ ಹರಕೆ ಹೊತ್ತು ಬರುತ್ತಾರೆ. ಮುಜರಾಯಿ ಇಲಾಖೆ ದೇಗುಲವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಸೋಮೇಶ್ವರ, ಶಂಭುಲಿಂಗೇಶ್ವರ ಪುಷ್ಕರಣಿಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುವುದರಿಂದ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಮಹಿಳಾ ಭಕ್ತೆಯರು ಅಧಿಕವಾಗಿ ಆಗಮಿಸುವುದರಿಂದ ಸ್ನಾನಘಟ್ಟ, ಬಟ್ಟೆ ಬದಲಾವಣೆ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ನಿರಂತರ ವಿದ್ಯುತ್, ವಾಹನ ನಿಲುಗಡೆಗೆ ಮೊದಲ ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಭಕ್ತರು ದರ್ಶನ ಪಡೆಯಲು, ಸರತಿಯಲ್ಲಿ ನಿಲ್ಲುವಾಗ ನೆರಳಿನ ವ್ಯವಸ್ಥೆಗೆ ಅಡಚಣೆಯಾಗದಂತೆ ಕ್ರಮವಹಿಸಿ. ದೇಗುಲದ ಸುತ್ತ ಬಾಳೆಹಣ್ಣು ಅಂಟಿಸುವುದು, ಪುಷ್ಕರಿಣಿಯಲ್ಲಿ ಗಂಗಾಪೂಜೆ ನೆಪದಲ್ಲಿ ಕೊಳದಲ್ಲಿ ಬಾಳೆಹಣ್ಣು, ಅರಿಶಿಣ, ಕುಂಕುಮ ಹಾಕದಂತೆ ಎಚ್ಚರಿಕೆ ವಹಿಸಲು ಕ್ರಮವಹಿಸಿ ಎಂದರು.

ಶಂಭುಲಿಂಗೇಶ್ವರ ದೇಗುಲ, ನಾಗಬನಕ್ಕೆ ತೆರಳಲು ಇರುವ ಬಂಡಿ ರಸ್ತೆ ಒತ್ತುವರಿ ಆಗಿರುವುದನ್ನು ತೆರವುಗೊಳಿಸಿ ದೇಗುಲಕ್ಕೆ ಭಕ್ತರು ತೆರಳಲು ಅನುವು ಮಾಡಿಕೊಡಿ. 3 ವರ್ಷ ಕಳೆದರೂ ದೇಗುಲ ನವೀಕರಣವಾಗಿಲ್ಲ, 4ವರ್ಷ ಕಳೆದರೂ ಜೋಡಿ ರಥ ನಿರ್ಮಾಣ ಆಗಿಲ್ಲ. ಸಮರ್ಪಕವಾಗಿ ಪೂಜಾರಾಧನೆ ಇಲ್ಲದೆ ಗ್ರಾಮದಲ್ಲಿ ಶಾಂತಿ, ನೆಮ್ಮದಿ ಇಲ್ಲವಾಗಿದೆ. ಯಾತ್ರಿ ನಿವಾಸ ನಿರ್ಮಾಣ ಅರ್ಧಕ್ಕೆ ನಿಂತು ಪಾಳು ಬಿದ್ದಿದೆ. ಹೊಸದಾಗಿ ನಿರ್ಮಿಸುತ್ತಿರುವ ದೇಗುಲದ ಛಾವಣಿ ಆರಂಭದಲ್ಲಿಯೇ ಸೋರುತ್ತಿದೆ. ಇತ್ತ ಯಾವುದೇ ಅಧಿಕಾರಿಗಳು ಗಮನಹರಿಸುತ್ತಿಲ್ಲ. ದೇಗುಲದ ವರಮಾನದಲ್ಲಿ ಸಾಕಷ್ಟು ಲೋಪವಾಗಿದ್ದು, ತನಿಖಾ ವರದಿ ಇದುವರೆಗೂ ಬಹಿರಂಗವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ತಹಸೀಲ್ದಾರ್ ಶ್ರೇಯಸ್, ಉಪತಹಸೀಲ್ದಾರ್ ವೀಣಾ, ತಾಪಂ ಇಒ ಸುಷ್ಮಾ, ಆರ್‌ಐ ನರೇಂದ್ರ, ಇನ್ಸ್‌ಸ್ಪೆಕ್ಟರ್ ಜಯರಾಂ, ಶ್ರೀನಿವಾಸ್, ಗ್ರಾಮ ಲೆಕ್ಕಿಗರು, ಗ್ರಾಮ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net