

ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಕ್ಷೇತ್ರಾಧಿಪತಿ ಶ್ರೀಆದಿರಂಗನಾಥಸ್ವಾಮಿಗೆ ತುಲಾ ಮಾಸದ ದಶಮಿಯ ಪ್ರಯುಕ್ತ ಅಷ್ಟ ತೀರ್ಥೋತ್ಸವವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಪಟ್ಟಣದ ದೇವಾಲಯದಿಂದ ಬುಧವಾರ ಮುಂಜಾನೆ 7ರಿಂದ ದೇಗುಲದ ಪ್ರಧಾನ ಅರ್ಚಕ ವಿಜಯಸಾರಥಿ ಅವರ ನೇತೃತ್ವದಲ್ಲಿ ಶ್ರೀದೇವಿ, ಭೂದೇವಿ ಹಾಗೂ ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಶ್ರೀರಂಗನಾಥಸ್ವಾಮಿ ಅವರ ಉತ್ಸವ ಮೂರ್ತಿಯನ್ನು ವಿಶೇಷ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಬಳಿಕ ಪಟ್ಟಣದ ಗಿಡ್ಡಿ ಬಾಗಿಲು(ಜಿ.ಬಿ.)ಹೊಳೆ, ವಾಟರ್ ಗೇಟ್, ಬಂಗಾರದೊಡ್ಡಿ ಗೂಳಿ ತಿಟ್ಟು ಬಳಿಕ ಚಂದ್ರವನ ಆಶ್ರಮದಲ್ಲಿ ಶ್ರೀಮಠದ ಪೀಠಾಧಿಪತಿ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಹ ವಿಶೇಷ ಪೂಜೆ ಸಲ್ಲಿಸಿ ನಾಡು, ನಾಡಿನ ಜನರ ಒಳಿತಿಗೆ ಪ್ರಾರ್ಥನೆ ಸಲ್ಲಿಸಿದರು.
ನಂತರ ಪಶ್ಚಿಮವಾಹಿನಿ ಹಾದಿಯಾಗಿ ಮುಂದುವರಿದು ಸಾಗಿದ ಉತ್ಸವ ಚಂದಗಾಲು ರಸ್ತೆಯ ನದಿ, ಗಂಜಾಂನ ಶ್ರೀ ನಿಮಿಷಾಂಬ ಸನ್ನಿಧಿ ಹಾಗೂ ತ್ರಿವೇಣಿ ಸಂಗಮದಲ್ಲಿ ಅಷ್ಟ ದಿಕ್ಕುಗಳಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಅಜ್ಞೆಯ, ನೈಋತ್ಯ ಮತ್ತು ವಾಯುವ್ಯ ದಿಕ್ಕುಗಳಲ್ಲಿ ಹರಿವ ಕಾವೇರಿ ನದಿಯಲ್ಲಿ ಶ್ರೀರಂಗನ ಪಂಚಲೋಹದ ಮೂರ್ತಿಗೆ ತೀರ್ಥ ಸ್ನಾನ ನೆರವೇರಿಸಿ ಅಷ್ಟ ಋಷಿ ವರ್ಯರಿಗೆ ಶ್ರೀರಂಗನಾಥಸ್ವಾಮಿಯ ಪುಣ್ಯ ದರ್ಶನ ಪ್ರಾಪ್ತಿ ಕರಿಸಿ ಅನೂಚನವಾಗಿ ನಡೆದುಬಂದ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ವೇದಮಂತ್ರ ಹಾಗೂ ವಿಷ್ಣು ಸಹಸ್ರನಾಮ ಪಠಣೆಯೊಂದಿಗೆ ದೇಗುಲದ ವೈದಿಕರು ಹಾಗೂ ಶ್ರೀರಂಗನ ಭಕ್ತರು ಜೀವನದಿ ಕಾವೇರಿಯಲ್ಲಿ ಪುಣ್ಯಸ್ನಾನ ಮಾಡಿ ತೀರ್ಥ ಪ್ರಸಾದ ಪಡೆದು ಪುನೀತರಾದರು. ಆಶ್ರಮದ ಆಡಳಿತಾಧಿಕಾರಿ ಶ್ರೀ ಚಿಕ್ಕತಿಮ್ಮಯ್ಯ, ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಇತರರು ಇದ್ದರು.