

ಮದ್ದೂರು: ನಗರದ ಚನ್ನೇಗೌಡ ಬಡಾವಣೆಯ ಶ್ರೀ ಸರ್ವಸಿದ್ಧಾಂತ ಯುವಕರ ಬಳಗ ಹಾಗೂ ಸನಾತನ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ವಿವಿಧ ಬಡಾವಣೆಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ಬಳಿಕ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಶಿಂಷಾ ನದಿಯಲ್ಲಿ ಸೋಮವಾರ ವಿಸರ್ಜನೆ ಮಾಡಲಾಯಿತು.
ಕಳೆದ ವರ್ಷ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಸಮೀಪ ಕಲ್ಲು ತೂರಾಟ ನಡೆದಿದ್ದ ಮಸೀದಿ ಮುಂದೆಯೇ ಗಣೇಶನ ಮೂರ್ತಿ ಮೆರವಣಿಗೆ ಬಂದ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.
ಮೆರವಣಿಗೆಯಲ್ಲಿ ಕೇರಳದ ವಾದ್ಯ ಸೇರಿದಂತೆ ವೀರಗಾಸೆ, ಕೀಲು ಕುದುರೆ, ಪೂಜಾ ಕುಣಿತ, ವಿವಿಧ ದೇವರುಗಳ ಪಟದ ಕಣಿತ ಸಾರ್ವಜನಿಕರ ಗಮನ ಸೆಳೆದವು. ಯುವಕರು ಹಾಗೂ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಎಸ್ಪಿ ಶೋಭಾರಾಣಿ ಅವರ ನೇತೃತ್ವದಲ್ಲಿ ಸುಮಾರು 650 ಪೊಲೀಸ್ ಸಿಬ್ಬಂದಿ, ಇನ್‌ಸ್ಪೆಕ್ಟರ್‌ಗಳು ಹಾಗೂ ಅಧಿಕಾರಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಪ್ರಮುಖ ವೃತ್ತಗಳು, ಮೆರವಣಿಗೆ ಸಾಗುವ ಮಾರ್ಗಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಜತೆಗೆ 30 ಕ್ಕೂ ಹೆಚ್ಚು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.
ಸೋಮವಾರ ಮುಂಜಾನೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದ 10 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸಾಗಣೆಯನ್ನು ನಿಷೇಧಿಸಲಾಗಿತ್ತು.
ಹಿಂದು ಪರ ಸಂಘಟನೆಗಳ ಸಂಚಾಲಕ ಗೋವರ್ಧನ್ ಸಿಂಗ್, ಹಿಂದು ಸಂಘಟನೆಗಳ ಮುಖಂಡರಾದ ಕೆ.ಟಿ.ನವೀನ್, ಸಿದ್ದು, ವೀರಭದ್ರಸ್ವಾಮಿ, ಸಿದ್ದು, ಶ್ರೇಯಸ್, ಅನಿಲ್, ನವೀನ್ ಇತರರು ಭಾಗವಹಿಸಿದ್ದರು.