

ಕೆ.ಎಂ.ದೊಡ್ಡಿ: ವಿದ್ಯಾರ್ಥಿಗಳು ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮಳವಳ್ಳಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಕಾವೇರಿ ಹೇಳಿದರು.
ಸಮೀಪದ ಮಣಿಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್ನೆಸ್ಸೆಸ್, ರೋವರ್-ರೇಂಜರ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದೇಶದ ಭವಿಷ್ಯದ ಬೆನ್ನೆಲುಬಾಗಿದ್ದು, ದೇಶ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಹೇಳಿದರು.
ಇಂದಿನ ಯುವಜನರಲ್ಲಿ ಮನರಂಜನೆ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಆರಂಭದಿಂದಲೇ ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸಿ, ಉತ್ತಮ ಗುರಿಯನ್ನು ಹೊಂದಿ ಅದನ್ನು ಸಾಧಿಸಲು ನಿರಂತರವಾಗಿ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಭಾರತೀನಗರದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನೀರಜಾಕ್ಷ ಮಾತನಾಡಿ, ಡಿಜಿಟಲ್ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಜ್ಞಾನಾರ್ಜನೆ ಹಾಗೂ ಅಧ್ಯಯನಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ದಾಸೇಗೌಡ ಮಾತನಾಡಿ, ಯುವಜನರು ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಮಾರಸಿಂಗನಹಳ್ಳಿ ಮಲ್ಲರಾಜು ಮಾತನಾಡಿದರು. ಡಾಕ್ಟರೇಟ್ ಪದವಿ ಪಡೆದ ಕಾಲೇಜಿನ ಗ್ರಂಥಪಾಲಕ ಸಿ.ಎಸ್.ಸುರೇಂದ್ರ ಚಂದೂಪುರ ಮತ್ತು ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಕೀರ್ತನಾ ಹಾಗೂ ರಾಜ್ಯಮಟ್ಟದ ಸ್ಕೌಟ್ ಮತ್ತು ಗೈಡ್ಸ್ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎ.ಟಿ.ಶ್ರೀನಿವಾಸಮೂರ್ತಿ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಭಿಷೇಕ್, ವಿವಿಧ ಸಮಿತಿಗಳ ಸಂಚಾಲಕರಾದ ಪ್ರೊ.ಸುರೇಶ್ ಬಾಬು, ಪ್ರೊ.ಮಂಚಯ್ಯ, ಪ್ರೊ.ಶಾರದಮ್ಮ, ಡಾ.ಪಾರ್ಥ, ಡಾ.ವಿಷಕಂಠ, ನಂದೀಶ್, ಪ್ರಸನ್ನ, ಡಾ. ರಶ್ಮಿ ಇತರರಿದ್ದರು.