

ಮೇಲುಕೋಟೆ: ಪಠ್ಯದ ಜತೆಗೆ ಮಕ್ಕಳು ಜೀವನ ರೂಪಿಸುವ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಪರಿಸರ ಪ್ರೇಮಿ, ಜನಪದ ಸೇವಾ ಟ್ರಸ್ಟ್ನ ಸುಮನಸ್ ಕೌಲಗಿ ಅಭಿಪ್ರಾಯಪಟ್ಟರು.
ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಹೊಸ ಜೀವನ ದಾರಿ ಕೇಂದ್ರಕ್ಕೆ ಭೇಟಿ ನೀಡಿದ್ದ ಮೇಲುಕೋಟೆಯ ಬಾಲಕರ ಶಾಲೆ ಮತ್ತು ಪ್ರೌಢಶಾಲೆ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಸಾವಯವ ಕೃಷಿ ಪದ್ಧತಿಯಡಿ ರಾಸಾಯನಿಕ ಮುಕ್ತ ಆಹಾರ ಬೆಳೆದು ಅದನ್ನೇ ಉಪಯೋಗಿಸಬೇಕು. ಇಂದು ಆಹಾರದ ಜತೆ ನಾವು ದಿನ ನಿತ್ಯ ವಿಷವನ್ನು ಸೇವಿಸುತ್ತಿದ್ದೇವೆ. ಹಿಂದಿನ ತಲೆಮಾರಿನಂತೆ ಆರೋಗ್ಯಕರ ಜೀವನ ಹೊಂದಬೇಕಾದರೆ ಸಾವಯವ ಕೃಷಿ ಪದ್ಧತಿಗೆ ಅನಿವಾರ್ಯವಾಗಿ ಹಿಂತಿರುಗಲೇಬೇಕಿದೆ ಎಂದರು.
ಇಂದು ಜೀವನ ಕೌಶಲ ಕಲಿಸುವ ಶಿಕ್ಷಣ ನಮಗೆ ಬೇಕಿದೆ. ಸಂವಾದದ ವೇಳೆ ಮುಂದೇನಾಗ ಬಯಸುತ್ತೀರಿ ಎಂಬ ಪ್ರಶ್ನೆಗೆ ಯಾರೂ ರೈತನಾಗುತ್ತೇನೆ ಎಂದು ಹೇಳಲಿಲ್ಲ. ನಾಡಿಗೆ ನಮಗೆ ಅನ್ನಬಟ್ಟೆ ನೀಡುವ ರೈತನಾಗಬೇಕೆಂದು ಯಾರೂ ಬಯಸುವುದಿಲ್ಲ. ಇತರ ಕಸುಬಿಗಿಂತ ಕೃಷಿ ಶ್ರೇಷ್ಠ. ರಾಸಾಯನಿಕಮುಕ್ತ ಆಹಾರ ಸೇವಿಸುತ್ತಾ ಬಂದರೆ ಆರೋಗ್ಯ ನಮ್ಮದಾಗುತ್ತದೆ. ರೈತರ ಮಕ್ಕಳು ಕೃಷಿಯಿಂದ ವಿಮುಖರಾದರೆ ದೇಶ ಬಹುದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಮಕ್ಕಳು ನೇಯ್ಗೆಕೇಂದ್ರ, ಸಾವಯವ ಕೃಷಿ ತೋಟ, ಬಣ್ಣದ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಮುಖ್ಯಶಿಕ್ಷಕ ಸಂತಾನರಾಮನ್, ಶಿಕ್ಷಕರಾದ ಚೇತನ್, ಶಂಕರ, ಜಯಂತಿ, ಶ್ರುತಿ, ಪೂರ್ಣಿಮಾ, ಅರಣ್ಯ ಇಲಾಖೆಯ ರಾಮಾನುಜ ಮತ್ತಿತರರು ಇದ್ದರು.