ರೈತ ಮುಖಂಡರಿಂದ ಪತ್ರ ಚಳವಳಿ

ರಾಜ್ಯಕ್ಕೆ ಅನ್ವಯಿಸುವಂತೆ ಕಬ್ಬಿನ ಬೆಲೆ ನಿಗದಿಗೆ ಒತ್ತಾಯ
suger cane rate ritha sangaha
ಶ್ರೀರಂಗಪಟ್ಟಣದ ಅಂಚೆ ಕಚೇರಿ ಬಳಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ಪತ್ರ ಬರೆದು ಜಿಲ್ಲೆಯ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಅಂಚೆ ಮೂಲಕ ಕಳುಹಿಸಿಕೊಟ್ಟರು.
Published on: 

ಶ್ರೀರಂಗಪಟ್ಟಣ: ರಾಜ್ಯಕ್ಕೆ ಅನ್ವಯಿಸುವಂತೆ ಕಬ್ಬಿನ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಿದರು.

ಪಟ್ಟಣದ ಅಂಚೆ ಕಚೇರಿ ಬಳಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ಜಮಾಯಿಸಿ ಪತ್ರ ಬರೆದು ಜಿಲ್ಲೆಯ ಸಚಿವರು, ಶಾಸಕರು, ಜನಪ್ರತಿನಿಧಿಗಳಿಗೂ ಅಂಚೆ ಮೂಲಕ ಕಳುಹಿಸಿಕೊಟ್ಟರು.

ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರಾಜ್ಯಾದ್ಯಂತ ಕಬ್ಬು ಬೆಳೆಗಾರರು ಹೋರಾಟದ ಹಾದಿ ಹಿಡಿದಿದ್ದಾರೆ. ಆದರೆ, ರೈತರ ವಿಚಾರದಲ್ಲಿ ನೆರವಿಗೆ ಬರಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಮೇಲಿನ ಜವಾಬ್ದಾರಿ ತೆಗೆದುಕೊಳ್ಳದೆ ಪರಸ್ಪರ ಆರೋಪ ಮಾಡುತ್ತಾ ಜಾರಿಕೊಳ್ಳುತ್ತಿವೆ ಎಂದು ದೂರಿದರು.

ಕೇಂದ್ರ ಸರ್ಕಾರ ಕಬ್ಬಿಗೆ ಕನಿಷ್ಠ ದರ ನಿಗದಿ ಮಾಡಬೇಕಾಗಿದೆ. ಸಕ್ಕರೆ ಬೆಲೆಗೆ ಸಂಬಂಧಿಸಿದಂತೆ ಕನಿಷ್ಠ 55 ರೂ. ನಿಗದಿ ಮಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, ಅಲ್ಲಿನ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಖಾನೆಯವರು ಹಾಗೂ ರೈತರನ್ನು ಕರೆದು ಟನ್ ಕಬ್ಬಿಗೆ 3600 ರೂ. ಮೊದಲನೇ ಕಂತಿನಲ್ಲಿ (ಕಬ್ಬು ಕಟಾವು ಮತ್ತು ಸಾಗಣೆ ಹೊರತುಪಡಿಸಿ), ಕಬ್ಬು ನುರಿತ ಮುಗಿದ ನಂತರ 2ನೇ ಕಂತಾಗಿ ಸುಮಾರು 200 ರೂ. ನಿಂದ 550 ರೂ.ಪಾವತಿಗೆ ಲಿಖಿತ ಒಪ್ಪಂದ ಮಾಡಿದ್ದಾರೆ. ಆದರೆ, ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದು ಬೇಸರ ತರಿಸಿದೆ ಎಂದು ಆರೋಪಿಸಿದರು.

ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ಹುಂಡವಾಡಿ ಮಹದೇವು, ಕೃಷ್ಣ, ರಾಮಕೃಷ್ಣ, ರಾಮಚಂದ್ರ, ರೈತ ಮುಖಂಡರು ಭಾಗವಹಿಸಿದ್ದರು.