

ಪಾಂಡವಪುರ: ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಮಲೆ ಮಹದೇಶ್ವರಸ್ವಾಮಿ ಜಾತ್ರೋತ್ಸವ ಮತ್ತು ರಥೋತ್ಸವ ಒಂಭತ್ತು ದಿನ ವಿಜೃಂಭಣೆಯಿಂದ ಜರುಗಿ ಮಂಗಳವಾರ ರಾತ್ರಿ ಸಂಪನ್ನಗೊಂಡಿತು.
ತಾಲೂಕಿನ ಮಹದೇಶ್ವರಪುರ, ತಿರುಮಲ ಸಾಗರ ಛತ್ರ, ಕೊಡಹಳ್ಳಿ ಹೊಸೂರು, ಇಂಗಲಗುಪ್ಪೆ, ಲಕ್ಷ್ಮೀ ಸಾಗರ, ಸಣಬ, ಸಣಬದಕೊಪ್ಪಲು ಹಾಗೂ ನೀಲನಹಳ್ಳಿ ಗ್ರಾಮಸ್ಥರು ಮಹದೇಶ್ವರನಿಗೆ ಒಂಭತ್ತು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಹಾಲರವಿ, ಎಣ್ಣೆಮಜ್ಜನ, ಹುಲಿ ವಾಹನೋತ್ಸವ, ಪಂಜಿನ ಸೇವೆ ಹಾಗೂ ಹೂವಿನ ಪಲ್ಲಕ್ಕಿ ಉತ್ಸವ ನೆರವೇರಿಸಿದರು.
ತಾಲೂಕಿನ ವಿವಿಧ ಗ್ರಾಮಗಳ ಭಕ್ತರು ಬಾಯಿಬೀಗ, ಆರತಿ ಬೆಳಗುವುದು ಸೇರಿದಂತೆ ಹಲವು ಹರಕೆಗಳನ್ನು ತೀರಿಸಿದರು. ಸಹಸ್ರಾರು ಭಕ್ತರು ಮಹದೇಶ್ವರನಿಗೆ ಭಕ್ತಿ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಎಂ.ಎಸ್.ಕೃಷ್ಣ ಮಾತನಾಡಿ, ಸುತ್ತಮುತ್ತಲಿನ ಗ್ರಾಮಗಳ ಸಹಕಾರದಿಂದ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆ ನೆರವೇರಿದೆ. ಇಲ್ಲಿನ ರಥೋತ್ಸವ ವಿಶೇಷವಾಗಿದ್ದು, ಮಕ್ಕಳ ಆಯಸ್ಸು, ಆರೋಗ್ಯ ವೃದ್ಧಿಗೆ ಜನರು ಪ್ರಾರ್ಥಿಸುತ್ತಾರೆ ಎಂದು ತಿಳಿಸಿದರು.