ಮನಸ್ಸಿನ ಮೈಲಿಗೆ ತೊಳೆಯಲು ಪುಸ್ತಕ ಅವಶ್ಯ

ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ
ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಲೇಖಕ ಸಿಂಗಾಪುರ ಲಕ್ಷ್ಮೇಗೌಡ ಅವರ ಸಂಚಲನ ಮತ್ತು ಹೆತ್ತವರ ತಳಮಳ ಕವನ ಸಂಕಲನಗಳ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ  ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು. ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಡಾ.ರಾಮೇಗೌಡ, ಸುನೀತ ಪುಟ್ಟಣ್ಣಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಇತರರು ಇದ್ದರು.
ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಲೇಖಕ ಸಿಂಗಾಪುರ ಲಕ್ಷ್ಮೇಗೌಡ ಅವರ ಸಂಚಲನ ಮತ್ತು ಹೆತ್ತವರ ತಳಮಳ ಕವನ ಸಂಕಲನಗಳ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು. ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಡಾ.ರಾಮೇಗೌಡ, ಸುನೀತ ಪುಟ್ಟಣ್ಣಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಇತರರು ಇದ್ದರು.SEKHAR
Published on: 

ಪಾಂಡವಪುರ: ಪವಿತ್ರವಾದ ನೀರು ಮನುಷ್ಯನ ಮೈಲಿನ ಮೈಲಿಗೆ ತೊಳೆದರೆ, ಉತ್ತಮವಾದ ಪುಸ್ತಕ ಮನಸ್ಸಿನ ಮೈಲಿಗೆಯನ್ನು ತೊಳೆಯುತ್ತವೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಅಭಿಪ್ರಾಯಪಟ್ಟರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಿಂಗಾಪುರ ಲಕ್ಷ್ಮೇಗೌಡ ಅವರ ಸಂಚಲನ ಮತ್ತು ಹೆತ್ತವರ ತಳಮಳ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಪುಸ್ತಕಗಳನ್ನು ಓದಿ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡರೆ ಅವುಗಳು ನಮ್ಮೊಳಗಿನ ಅಂತರಾಳದಲ್ಲಿರುವ ಮೈಲಿಗೆಯನ್ನು ತೊಳೆಯುತ್ತವೆ. ಹಾಗಾಗಿ ಯಾರಿಗೆ ಮನಸ್ಸಿನ ಶುದ್ಧತೆ ಬೇಕಾಗಿದೆಯೋ ಅವರು ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾವು ಸೇವಿಸುವ ಆಹಾರ ನಮ್ಮ ದೇಹ ಬೆಳೆಸಲು, ಬದುಕು ಉಳಿಸಿಕೊಳ್ಳುವುದಕ್ಕಾಗಿ. ಆದರೆ, ಕೆಲವೊಮ್ಮೆ ನಾವು ತಿನ್ನುವ ಅನ್ನ, ಕುಡಿಯುವ ನೀರು ಸಹ ನಮ್ಮ ದೇಹಕ್ಕೆ ಹಾನಿ ಮಾಡುತ್ತವೆ. ಹಾಗಾಗಿ ಯಾವ ಅನ್ನ ತಿನ್ನಬೇಕು, ಯಾವ ನೀರು ಕುಡಿಯಬೇಕು ಎಂಬುದನ್ನು ಯೋಚಿಸಬೇಕು. ಹಾಗೆಯೇ ಕೈತೊಳೆದು, ಮನಸ್ಸು ತೊಳೆದು ಮುಟ್ಟುವಂತಹ ಕೆಲ ಪವಿತ್ರ ಪುಸ್ತಕಗಳು ನಮ್ಮಲ್ಲಿವೆ, ಕೆಲವು ಕೆಟ್ಟ ಪುಸ್ತಕಗಳು ಸಹ ನಮ್ಮಲ್ಲಿವೆ ಯಾವ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ಆಯ್ಕೆಗಳಾಗಿರುತ್ತವೆ ಎಂದರು.

ಎಐ ನಾಗಲೋಟದಲ್ಲಿ ಓಡುತ್ತಿರುವ, ಓದಿಗೆ ಅರ್ಥವಿದೆಯಾ ಎಂಬ ಭಾವನೆ ಬರುತ್ತಿರುವ, ಗ್ರೇಡಿಂಗ್, ರ‌್ಯಾಂಕಿಂಗ್, ಕೋಚಿಂಗ್ ಅವಶ್ಯಕತೆ ಇದೆಯಾ? ಎಂಬ ದಿನಮಾನದಲ್ಲಿ ಲಕ್ಷ್ಮೇಗೌಡರು ಎರಡು ಉತ್ತಮವಾದ ಕವನ ಸಂಕಲನ ಹೊರತಂದಿದ್ದಾರೆ. ಇದರಲ್ಲಿ ವಿಜ್ಞಾನ, ಸಾಹಿತ್ಯ, ಆಧ್ಯಾತ್ಮಿಕ, ಸಾಂಸಾರಿಕ ಜೀವನದಲ್ಲಿನ ಸಮಸ್ಯೆಗಳು, ಸಾಮಾನ್ಯ ಜನರ, ಜನಪರವಾದ ಮಾತುಗಳಿವೆ ಎಂದರು.

ನಾವು ತಿನ್ನುವ ಅನ್ನ ದೇಹಕ್ಕೆ ಹೇಗೆಲ್ಲ ಶಕ್ತಿ ನೀಡುತ್ತದೆ ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಪುಸ್ತಕದ ಮೂಲಕ ಕೊಡುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಎಲ್ಲರು ಪುಸ್ತಕವನ್ನು ಖರೀದಿಸಿ ಓದಬೇಕು. ಆ ಮೂಲಕ ಪುಸ್ತಕ ಪರಂಪರೆಯನ್ನು ಮುಂದುವರೆಸಬೇಕು ಎಂದು ತಿಳಿಸಿದರು.

ಜನಪದ ವಿದ್ವಾಂಸ ಡಾ.ರಾಮೇಗೌಡ(ರಾಗೌ) ಮಾತನಾಡಿ, ಎಲ್ಲವು ಇದ್ದು ಇಲ್ಲದಂತೆ ಕಾಣುವ ವ್ಯಕ್ತಿ ಲಕ್ಷ್ಮೇಗೌಡ. ರಂಗಭೂಮಿ, ಹರಿಕಥೆ ವಿದ್ವಾನ್, ಹಾಡುಗಾರಿಕೆ, ಹಾಸ್ಯ ಕಲಾವಿದರಾಗಿದ್ದಾರೆ. ರೈತರಿಗಾಗಿ ಬರಹಗಾರರಾಗಿದ್ದಾರೆ. 50 ವರ್ಷಗಳಿಂದ ನಿರಂತರವಾಗಿ ಶಿಕ್ಷಕ ವೃತ್ತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕವಿತೆಯಿಂದ ಸಮಾಜದಲ್ಲಿ ಹಲವು ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಿಂಗಾಪುರ ಲಕ್ಷ್ಮೇಗೌಡ ಅವರ ಸಂಚಲನ ಮತ್ತು ಹೆತ್ತವರ ತಳಮಳ ಎಂಬ ಎರಡು ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು. ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಪುಸ್ತಕ ಕುರಿತು ಮಾತನಾಡಿದರು.

ರೈತ ನಾಯಕಿ ಸುನೀತ ಪುಟ್ಟಣ್ಣಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ಪ್ರೊ.ಕೆ.ಕಾಳಚನ್ನೇಗೌಡ, ಡಾ.ಅಣ್ಣಯ್ಯ ತೈಲೂರು, ಕಿರಣ್ ಕುಮಾರ್, ಯುವ ಬರಹಗಾರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಎಚ್.ಎನ್.ಚಿಟ್ಟಿಬಾಬು, ಎನ್.ಆರ್.ಪೂರ್ಣಚಂದ್ರ, ಲಕ್ಷಮ್ಮ, ಪಾಂಡುರಂಗ, ಭವ್ಯಾ ಪಾಂಡುರಂಗ ಇತರರು ಇದ್ದರು.