

ಕೆ.ಎಂ.ದೊಡ್ಡಿ: ಸಮೀಪದ ಆದಿ ಹೊನ್ನಾಯಕನಹಳ್ಳಿಯ ಧರೆಗೆ ದೊಡ್ಡವರು ಮಂಟೇಸ್ವಾಮಿ ಪುಣ್ಯಕ್ಷೇತ್ರದಲ್ಲಿ ದೀಪಾವಳಿ ಅಂಗವಾಗಿ ಆಯೋಜಿಸಿದ್ದ ಮಂಟೇಸ್ವಾಮಿ ಜಾತ್ರಾ ಮಹೋತ್ಸವವು ಭಕ್ತಿ ಭಾವದಿಂದ ನೆರವೇರಿತು.
ಹೊನ್ನಾಯಕನಹಳ್ಳಿಯ ಮಂಟೇಸ್ವಾಮಿ ಮಠ ಹಾಗೂ ಕಪ್ಪಡಿ ರಾಚಪ್ಪಾಜಿ ಮಠದ ಮಠಾಧಿಪತಿಗಳಾದ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸು ಅವರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.
ಮಠಾಧಿಪತಿಗಳಾದ ಎಂ.ಎಲ್ ವರ್ಚಸ್ವಿ ಶ್ರೀಕಂಠಸಿದ್ಧಲಿಂಗರಾಜೇ ಅರಸು ಮಾತನಾಡಿ, ಸಮಾಜಕ್ಕೆ ಬೆಳಕು ನೀಡಲು ಮಂಟೇಸ್ವಾಮಿ ಪರಂಜ್ಯೋತಿಯಾಗಿ ಉತ್ತರ ದೇಶದಿಂದ ದಕ್ಷಿಣ ಪ್ರಾಂತ್ಯಕ್ಕೆ ಬಂದು ಶಿಶು ಮಕ್ಕಳನ್ನು ಪಡೆದು ಪವಿತ್ರಗೊಳಿಸಿ ನೀಲಗಾರರನ್ನಾಗಿ ಮಾಡುವ ಮೂಲಕ ನೀಲಗಾರರ ಪರಂಪರೆ ಆರಂಭಿಸಿದ್ದರು.
12ನೇ ಶತಮಾನದಿಂದ ನೀಲಗಾರರ ಪರಂಪರೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಮಂಟೇಸ್ವಾಮಿ ರಾಚಪ್ಪಾಜಿ ಮಠ ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಕೂಡ ಸಕ್ರಿಯವಾಗಿ ಸೇವೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.
ಮಂಟೇಸ್ವಾಮಿ, ಸಿದ್ದಪ್ಪಾಜಿ ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗವಹಿಸುವುದು ದೇವರ ಭಕ್ತಿಗೆ ಸಾಕ್ಷಿಯಾಗಿದೆ. ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಿದ ಭಕ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಗ್ರಾಮದ ದೊಡ್ಡರೆಕೆರೆ ಸಮೀಪದಲ್ಲಿರುವ ರಂಗಮಂದಿರದಲ್ಲಿ ಮಂಟೇಸ್ವಾಮಿ ಕಂಡಾಯ ಹಾಗೂ ಬಸವಪ್ಪನ ಹೂವು ಹೊಂಬಾಳೆ ಪೂಜಾ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಠದ ಧಾರ್ಮಿಕ ಸಂಪ್ರದಾಯ ಹಾಗೂ ಆಚರಣೆಗಳಿಗೆ ವಿಶೇಷ ಮಹತ್ವ ನೀಡಲಾಗಿದ್ದು, ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಮಠಾಧಿಪತಿಗಳ ನೇತೃತ್ವದಲ್ಲಿ ಸೂರ್ಯಪಾಣಿ, ಚಂದ್ರಪಾಣಿ, ಸತ್ತಿಗೆ, ದೊಡ್ಡ ಸತ್ತಿಗೆ ಸೇರಿದಂತೆ ವಿವಿಧ ಬಿಂಕು-ಬಿರುದುಗಳೊಂದಿಗೆ ದೇವರ ಉತ್ಸವ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಗ್ರಾಮದ ಪ್ರತಿಯೊಂದು ಬೀದಿಯಲ್ಲಿಯೂ ದೇವರ ಉತ್ಸವ ಸಾಗುತ್ತಿದ್ದಂತೆ ಭಕ್ತರು ಮನೆಗಳ ಮುಂದೆ ನಿಂತು ಪೂಜೆ ಸಲ್ಲಿಸಿ, ಹೂವು, ಹಣ್ಣು ಅರ್ಪಿಸಿ ಭಕ್ತಿಭಾವ ಮೆರೆದು ಮೆರವಣಿಗೆಯುದ್ದಕ್ಕೂ ಮಂಟೇಸ್ವಾಮಿಯ ನಾಮಸ್ಮರಣೆ ಹಾಗೂ ಧಾರ್ಮಿಕ ಉತ್ಸಾಹ ಮನೆಮಾಡಿತ್ತು.
ಮಂಗಳವಾರ ಮುಂಜಾನೆ 6 ಗಂಟೆಗೆ ಜಗನ್ಮಾತೆಯ ಜ್ಯೋತಿಯನ್ನು ಬೆಳಗಿಸುವ ಮೂಲಕ ಜಾತ್ರೆಯ ಧಾರ್ಮಿಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಾಯಿತು. ಜ್ಯೋತಿ ಬೆಳಗಿದ ಸಂದರ್ಭದಲ್ಲಿ ಭಕ್ತರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ, ತಮ್ಮ ಕುಟುಂಬಗಳ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಗಾಗಿ ದೇವರಲ್ಲಿ ವಿಶೇಷ ಬೇಡಿಕೆಗಳನ್ನು ಸಲ್ಲಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಂಟೇಸ್ವಾಮಿ ಹಾಗೂ ಬಸವಪ್ಪನ ದರ್ಶನ ಪಡೆದು ಪುನೀತರಾದರು. ವಿಶೇಷವಾಗಿ ಮಂಟೇಸ್ವಾಮಿ ಬಸವಪ್ಪನಿಗೆ ಭಕ್ತರು ಕಾಣಿಕೆಯಾಗಿ ನೀಡಿದ ಐನೂರು ಹಾಗೂ ನೂರು ರೂಪಾಯಿ ನೋಟುಗಳಿಂದ ಅಲಂಕರಿಸಿರುವುದು ಜಾತ್ರೆಯ ಮತ್ತೊಂದು ವಿಶೇಷ ಆಕರ್ಷಣೆಯಾಗಿತ್ತು. ಭಕ್ತರ ಅಪಾರ ಶ್ರದ್ಧೆ, ನಂಬಿಕೆ ಹಾಗೂ ಹರಕೆಯ ಸಂಕೇತವಾಗಿ ಈ ಅಲಂಕಾರ ಗಮನ ಸೆಳೆಯಿತು.
ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತರಿಗೆ ಮಠದ ವತಿಯಿಂದ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನದೊಂದಿಗೆ ಪ್ರಸಾದ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ಜಾತ್ರಾ ಮಹೋತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಬನ್ನಹಳ್ಳಿ ವಿಶ್ವಕರ್ಮ ಸಮುದಾಯದ ಮುಖಂಡರು ವಹಿಸಿಕೊಂಡು, ಯಾವುದೇ ಲೋಪದೋಷಗಳಿಲ್ಲದೆ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ಶ್ರಮಿಸಿದರು. ಸಮುದಾಯದ ಮುಖಂಡರು, ಯುವಕರು ಹಾಗೂ ಗ್ರಾಮಸ್ಥರು ಒಗ್ಗಟ್ಟಿನಿಂದ ಕೈಜೋಡಿಸಿ ಜಾತ್ರೆಯ ಯಶಸ್ಸಿಗೆ ಸಹಕರಿಸಿದರು.
ಒಟ್ಟಾರೆ, ಹೊನ್ನಾಯಕನಹಳ್ಳಿಯ ಧರೆಗೆ ದೊಡ್ಡವರು ಮಂಟೇಸ್ವಾಮಿ ಪುಣ್ಯಕ್ಷೇತ್ರದಲ್ಲಿ ನಡೆದ ದೀಪಾವಳಿ ಜಾತ್ರಾ ಮಹೋತ್ಸವವು ಧಾರ್ಮಿಕ ಪರಂಪರೆ, ಭಕ್ತಿ, ಶ್ರದ್ಧೆ ಹಾಗೂ ಸಾಂಪ್ರದಾಯಿಕ ಆಚರಣೆಗಳ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ಸಾವಿರಾರು ಭಕ್ತರ ಭಾಗವಹಿಸುವಿಕೆಯಿಂದ ಜಾತ್ರೆಯು ಭವ್ಯವಾಗಿ ನೆರವೇರಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.