ಬರ ನಿರ್ವಹಣೆಯಲ್ಲಿ ತಾಲೂಕು ಆಡಳಿತ ವಿಫಲ

Taluk administration fails in drought management.
ಪಾಂಡವಪುರ ತಾಲೂಕು ಆಡಳಿತ ಮತ್ತು ತಾಪಂ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ತಾಲೂಕು ಆಡಳಿತ ಮುತ್ತಿಗೆ ಹಾಕಿ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.
ಪಾಂಡವಪುರ ತಾಲೂಕು ಆಡಳಿತ ಮತ್ತು ತಾಪಂ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ತಾಲೂಕು ಆಡಳಿತ ಮುತ್ತಿಗೆ ಹಾಕಿ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.
Published on: 

ಪಾಂಡವಪುರ: ಬರ ಪರಿಸ್ಥಿತಿ ನಿರ್ವಹಣೆ, ತಾಲೂಕು ಆಡಳಿತ ಮತ್ತು ತಾಪಂ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಸೋಮವಾರ ತಾಲೂಕು ಕಚೇರಿ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಐದುದೀಪ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು ರಾಜ್ಯ ಸರ್ಕಾರ, ತಾಲೂಕು ಆಡಳಿತದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ತೆರೆದ ವಾಹನದಲ್ಲಿ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು, ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯರಸ್ತೆ ಸಂಚಾರ ತಡೆದು ಸ್ಥಳೀಯ ಆಡಳಿತದ ವಿರುದ್ಧ ಧಿಕ್ಕಾರದರು.

ಸಿ.ಎಸ್.ಪುಟ್ಟರಾಜು ಮಾತನಾಡಿ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ತಾಲೂಕು ಕಚೇರಿ, ತಾಲೂಕು ಪಂಚಾಯತಿ, ಸೆಸ್ಕ್ ಮತ್ತು ಗ್ರಾಪಂಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಇ-ಸ್ವತ್ತು, ಸರ್ವೇ ಕಾರ್ಯ, ಖಾತೆ ಬದಲಾವಣೆ ಸೇರಿದಂತೆ ಎಲ್ಲ ಕೆಲಸಗಳಿಗೂ ಇಂತಿಷ್ಟು ಎಂದು ಹಣ ನಿಗದಿಪಡಿಸಿ ಜನರನ್ನು ಶೋಷಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಎಚ್ಚೆತ್ತು ಜನತೆ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕು, ಇಲ್ಲವಾದರೆ ಖುದ್ದು ನಿಂತು ಅಧಿಕಾರಿಗಳಿಗೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಅಧಿಕಾರಿಗಳು ಕಾನೂನು ವ್ಯಾಪ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಸಕಾಲಕ್ಕೆ ವಿಲೇವಾರಿಯಾಗುತ್ತಿಲ್ಲ. ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ, ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಲ್ಲಿಸುತ್ತಿರುವ ಅರ್ಜಿಗಳ ವಿಲೇವಾರಿ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಪಡಿತರ ಪಡೆಯಲು ಇ-ಕೆವೈಸಿ ಮಾಡಿಸುವುದಕ್ಕೆ ಜನರು ಪರದಾಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು 14-15 ತಿಂಗಳಾದರೂ ರೈತರ ಕಬ್ಬು ಕಟಾವು ಮಾಡುತ್ತಿಲ್ಲ, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡದಿದ್ದರೆ ಜನ ರೊಚ್ಚಿಗೆದ್ದು ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದರು.

ಉಸ್ತುವಾರಿ ಸಚಿವರ ವಿರುದ್ಧ ಕಿಡಿ: ಸಚಿವ ಚಲುವರಾಯಸ್ವಾಮಿ ಅವರೇ ನಿಮ್ಮನ್ನು ನೀರಾವರಿ ಸಚಿವರನ್ನಾಗಿ ಮಾಡಿರೋದು ರಾಜ್ಯದ ರೈತರ ಹಿತ ಕಾಯುವುದಕ್ಕಾಗಿ. ಆದರೆ ನೀವು ತಮಿಳುನಾಡಿಗೆ ನೀರು ಬಿಟ್ಟು ರೈತರ ಹಿತ ಕಡೆಗಣಿಸಿದ್ದೀರಾ. ತಮಿಳುನಾಡಿಗೆ ನೀರು ಹರಿಸುವುದನ್ನು ಬಿಟ್ಟು ಮೊದಲು ರಾಜ್ಯದ ಜನತೆಯ ಹಿತಕಾಯುವ ಕೆಲಸ ಮಾಡಿ, ಬರ ಪರಿಹಾರಕ್ಕಾಗಿ ಎಕರೆಗೆ 2500 ರೂ.ಘೋಷಣೆ ಮಾಡಿರುವುದನ್ನು ಬಿಟ್ಟು ಎಕರೆ 25 ಸಾವಿರ ರೂ.ಪರಿಹಾರ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಮಹಿಳಾ ಅಧ್ಯಕ್ಷೆ ಅನುಪಮಾ, ಮುಖಂಡರಾದ ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಎಸ್ ಟಿಜಿ ಶಿಕ್ಷಣ ಸಂಸ್ಥೆ ಸಿಇಒ ಸಿ.ಪಿ.ಶಿವರಾಜು, ಹಾರೋಹಳ್ಳಿ ಎಚ್.ಸಿ.ಕೃಷ್ಣೇಗೌಡ(ಪಟೇಲ), ಪ್ರಸನ್ನಕುಮಾರ್, ಪುರಸಭೆ ಮಾಜಿ ಅಧ್ಯಕ್ಷರಾದ ಡಿ.ಶ್ರೀನಿವಾಸ್, ಆರ್.ಸೋಮಶೇಖರ್, ಮುಖಂಡರಾದ ಅನಿಲ್, ಚೇತನ್, ವಿ.ಎಸ್.ನಿಂಗೇಗೌಡ, ಪಿ.ಎಸ್.ಲಿಂಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net