ಫಲತಾಂಬೂಲದ ಪ್ರತೀಕ ಯಲಾದಹಳ್ಳಿ

ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಗ್ರಾಮ
ಯಲಾದಹಳ್ಳಿ ಗ್ರಾಮದ ವಿಹಂಗಮ ನೋಟ.
ಯಲಾದಹಳ್ಳಿ ಗ್ರಾಮದ ವಿಹಂಗಮ ನೋಟ.
Published on: 

ಕಿಕ್ಕೇರಿ: ಎತ್ತ ನೋಡಿದರೂ ಚಾಮರದಂತೆ ಹಸಿರು ಹೊದ್ದ ಪೈರು... ಪ್ರಕೃತಿ ಸೊಬಗಿನಲ್ಲಿ ಕಂಗೊಳಿಸುವ ಸುಂದರ ಗ್ರಾಮ.. ಇದು ಕಿಕ್ಕೇರಿ ಹೋಬಳಿಯ ಯಲಾದಹಳ್ಳಿ ಗ್ರಾಮದ ಸುಂದರ ಪರಿಸರ.

ಬಲು ಹಿಂದೆ ಸೌರಾಷ್ಟ್ರದಿಂದ ಸೋಮೇಶ್ವರ, ಶಂಭುಲಿಂಗೇಶ್ವರ ದೇವರನ್ನು ಭೈರವರಾಜರು ತಂದಿದ್ದು, ಮುತ್ತಿನ ವ್ಯಾಪಾರಿಗಳಾದ ಆದಿಶೆಟ್ಟಿ, ಕೋರಿಶೆಟ್ಟಿ ವ್ಯಾಪಾರ ಪರ್ಯಟನೆ ಮಾಡುವ ವೇಳೆ ಈ ಕ್ಷೇತ್ರಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ತದನಂತರ ಚೋಳರ ಸಾಮಂತ ದೊರೆಗಳು ಈ ಕ್ಷೇತ್ರಕ್ಕೆ ಭೇಟೆಗಾಗಿ ಬಂದಿದ್ದರು ಎಂಬುದು ಈಗ ಇತಿಹಾಸ. ಈ ವೇಳೆ ಅಲ್ಲಿದ್ದ ಬಿದಿರು ಮೆಳೆ ಕಡಿಯುವಾಗ ಉದ್ಭವ ಲಿಂಗಸ್ವರೂಪಿ ಶಂಭುಲಿಂಗೇಶ್ವರರ ತಲೆಗೆ ಪೆಟ್ಟಾಗುತ್ತದೆ. ಪೆಟ್ಟು ಮಾಡಿರುವ ನೀನು ಪ್ರಾಯಶ್ಚಿತವಾಗಿ ಗುಡಿ ಕಟ್ಟಿಸು, ಪೂಜಾರಾಧನೆ ಮಾಡು, ಬಿಲ್ವ ಪತ್ರೆ ವೃಕ್ಷ ಬೆಳೆಸಿ ಅರ್ಚನೆ, ಗಾಣದಲ್ಲಿ ಎಳ್ಳಿನ ಎಣ್ಣೆ ತೆಗೆದು ಮಜ್ಜನ, ದೀಪದಾರತಿ, ವಿಳ್ಳೆಯ ಫಲತಾಂಬೂಲ ಅರ್ಪಿಸು ಎಂದು ಶಂಭುಲಿಂಗೇಶ್ವರ ಅಶರೀರವಾಣಿಯಾಗಿ ನುಡಿಯುತ್ತಾರೆ. ಇದರ ಪ್ರತೀಕವಾಗಿ ಕ್ಷೇತ್ರದ ಜನತೆ ವೀಳ್ಯದೆಲೆ ಫಲತಾಂಬೂಲವನ್ನು ಅಂದು ಶ್ರದ್ಧಾಭಕ್ತಿಯಿಂದ ನೀಡುತ್ತಿದ್ದರು. ಇದರ ಪ್ರತೀಕವಾಗಿ ವೀಳ್ಯದೆಲೆ ಬೆಳೆಯ ವಿಳ್ಳೆಯ ಫಲತಾಂಬೂಲವನ್ನು ಶಿವನಿಗೆ ಅರ್ಪಿಸುತ್ತಿದ್ದ ಸ್ಥಳವೇ ಯಲಾದಹಳ್ಳಿ ಎನ್ನುತ್ತಾರೆ ಹಿರಿಕರು.

ಮತ್ತೊಂದು ಸ್ಥಳ ಪುರಾಣದಂತೆ ಈ ಕ್ಷೇತ್ರದ ಗಡಿ(ಎಲ್ಲೆ) ಗುರುತಿಸುವ ಸಲುವಾಗಿ ಹಾಗೂ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತಿದ್ದ ಗ್ರಾಮವಾದ ಕಾರಣ ಯಲಾದಹಳ್ಳಿ ಎನ್ನಲಾಗುತ್ತದೆ ಎನ್ನುವ ಮಾತಿದೆ.

ಈ ಮೊದಲು ಈಗಿರುವ ಗ್ರಾಮ ತುಸು ದೂರದ ಹಳ್ಳದಲ್ಲಿತ್ತು. ಹಳ್ಳಕೊಳ್ಳಗಳು ಹರಿದು ಗ್ರಾಮಕ್ಕೆ ಹಾನಿಯಾಯಿತು. ಪರಿಣಾಮ ತುಸು ದೂರದಲ್ಲಿನ ಎತ್ತರ ಪ್ರದೇಶಕ್ಕೆ ಗ್ರಾಮ ಸ್ಥಳಾಂತರವಾಯಿತು. ಹೆಚ್ಚು ವೀರಶೈವ, ಜತೆಗೊಂದಿಷ್ಟು ಅನುಸೂಚಿತ ವರ್ಗದವರು ನೆಲೆಸಿದ ಕಾರಣ ಯಲಾದಹಳ್ಳಿಯಾಗಿ, ತುಸು ದೂರದಲ್ಲಿ ರೈತಾಪಿ ಒಕ್ಕಲಿಗ ಸಮಾಜದವರು ನೆಲೆಸಿದ ಸ್ಥಳ ಐನೋರಹಳ್ಳಿಯಾಗಿ, ಹಾಲುಮತಸ್ಥರು ನೆಲೆಸಿರುವ ತಾಣವನ್ನು ಯಲಾದಹಳ್ಳಿ ಕೊಪ್ಪಲು ಗ್ರಾಮವಾಗಿ ಅನುಕೂಲಕ್ಕೆ ತಕ್ಕಂತೆ ಅಂದಿನ ಹಿರಿಯರು ಹೆಸರು ಬದಲಿಸಿದರು.

ತಾಂಬೂಲವೇ ಮಹಾಪ್ರಸಾದ

ಗ್ರಾಮದಲ್ಲಿ ಸೋಮೇಶ್ವರ, ಶಂಭುಲಿಂಗೇಶ್ವರ ಸ್ವಾಮಿಯ ಆರಾಧಕರು ಪ್ರಧಾನವಾಗಿದ್ದು ಐನೋರಹಳ್ಳಿ, ಯಲಾದಹಳ್ಳಿ ಕೊಪ್ಪಲು ಗ್ರಾಮ ಕಂದಾಯ ದಾಖಲೆ ಪ್ರಕಾರ ಯಲಾದಹಳ್ಳಿ ಎಲ್ಲೆ(ಗಡಿ) ಎಂದು ಗುರ್ತಿಸಲ್ಪಟ್ಟಿದೆ. ಸಾಸಲು ಗ್ರಾಮದಲ್ಲಿನ ಸೋಮೇಶ್ವರ, ಶಂಭುಲಿಂಗೇಶ್ವರ ದೇವರಿಗೆ ಪೂಜಾರಾಧನೆ ಮಾಡಲು ಇಲ್ಲಿ ನೆಲೆಸಿದ್ದ ಜಂಗಮರು ದೇವರಿಗೆ ವೀಳ್ಯ (ತಾಂಬೂಲ) ನೀಡಿ ಹೋಗುತ್ತಿದ್ದರು. ಭಕ್ತರು ಮಹಾಪ್ರಸಾದವಾಗಿ ಈ ತಾಂಬೂಲ ಸ್ವೀಕರಿಸುತ್ತಿದ್ದರು ಎನ್ನಲಾಗುತ್ತದೆ.

ಕೃಷಿಯೇ ಪ್ರಧಾನ

ಹೋಬಳಿಯ ಉತ್ತರ ದಿಕ್ಕಿನಲ್ಲಿರುವ ಗ್ರಾಮದ ಸುತ್ತ ಹೇಮಾವತಿ ನಾಲೆ ನೀರು ಹರಿಯುತ್ತಿದೆ. ಎತ್ತ ನೋಡಿದರೂ ತೆಂಗು, ಅಡಕೆ, ಕಬ್ಬು, ಹೂ ತೋಟವಿದೆ. ಗ್ರಾಮ ಕೃಷಿ ಪ್ರಧಾನವಾಗಿದ್ದು, ಹೈನುಗಾರಿಕೆ ಜತೆ ಕುರಿ ಸಾಕಣೆಯೂ ಇದೆ. ನಗರ ಪ್ರದೇಶಕ್ಕೆ ತೆರಳದೆ ಯುವಕರು ಓದು ಮುಗಿಸಿ ಬೇಸಾಯದಲ್ಲಿ ತೊಡಗಿಕೊಂಡಿದ್ದಾರೆ. ಸೇವಂತಿಗೆ, ತರಕಾರಿ ಬೆಳೆ ಕೃಷಿಯಲ್ಲಿದ್ದು ನಿತ್ಯ ಮುಂಜಾನೆ ಬೆಂಗಳೂರು ಮತ್ತಿತರ ನಗರಪ್ರದೇಶಕ್ಕೆ ಸರಬರಾಜು ಮಾಡಲಾಗುತ್ತದೆ. ಈ ಗ್ರಾಮದ ತುಸು ದೂರದಲ್ಲಿ ಶಂಭುಲಿಂಗೇಶ್ವರ ದೇಗುಲ, ಸರ್ಪರಾಜ ಸಂಚಾರ ಮಾಡುವ ನಾಗಕ್ಷೇತ್ರವಾದ ನಾಗಬನ ಇದೆ.

ಅವಳಿ ಗ್ರಾಮ: ಯಲಾದಹಳ್ಳಿ ಹಾಗೂ ಯಲಾದಹಳ್ಳಿ ಕೊಪ್ಪಲು ಅವಳಿ ಗ್ರಾಮಗಳಾಗಿದ್ದು, ಜಾತ್ರಾ ಮಹೋತ್ಸವ, ವಿಶೇಷ ಹಬ್ಬ ಹರಿದಿನಗಳಲ್ಲಿ ಸೋದರತ್ವದಿಂದ ಸಾಮೂಹಿಕವಾಗಿ ಭಾಗಿಯಾಗುತ್ತಾರೆ. ಐಕನಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮ ಸೇರಿದ್ದು ಸುಮಾರು 450ಜನಸಂಖ್ಯೆ ಇದೆ. ಸುಶಿಕ್ಷಿತ ಶಿಕ್ಷಕರು, ಆರಕ್ಷಕ ಇಲಾಖೆ, ಸಾರಿಗೆ ಇಲಾಖೆ ನೌಕರರಿದ್ದು, ಇಲ್ಲಿನ ಯುವಕರು ವಿದೇಶದಲ್ಲೂ ಇದ್ದಾರೆ. ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು ದಾಖಲಾತಿ ಕೊರತೆಯಿದೆ. ರೈತಾಪಿ ಮಕ್ಕಳು ಹೆಚ್ಚಿನ ಶಿಕ್ಷಣಕ್ಕೆ ಸಾಸಲು ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಹತ್ತಾರು ಖಾಸಗಿ ಶಾಲೆ ವಾಹನಗಳು ಗ್ರಾಮಕ್ಕೆ ಬರುತ್ತಿದ್ದು ಸರ್ಕಾರಿ ಶಾಲೆ ಮುಚ್ಚುವ ಭೀತಿ ಗ್ರಾಮದಲ್ಲಿದೆ.

ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿದ ಗ್ರಾಮ ಎಂದು ಹಿರಿಯರಿಂದ ತಿಳಿದಿದೆ. ಶಿವನಿಗೆ(ಶಂಭುಲಿಂಗೇಶ್ವರ) ವಿಳ್ಳೆಯಾಗಿ ಫಲ ತಾಂಬೂಲ ಅರ್ಪಿಸುತ್ತಿದ್ದ ಗ್ರಾಮ ನಮ್ಮದು ಎಂಬುದು ಹೆಮ್ಮೆಯ ವಿಚಾರ. ಭಕ್ತಿ ಹಾಗೂ ಆರಾಧನೆಯಲ್ಲಿ ನಮ್ಮೂರಿಗೆ ಬಲುದೊಡ್ಡ ಹೆಸರಿದೆ.

ಪರಮೇಶ್ ಗ್ರಾಮಸ್ಥ

ಗ್ರಾಮದಲ್ಲಿ ಬಸವೇಶ್ವರ, ಹರಿಯಾಲದಮ್ಮ, ಮಾರಮ್ಮ ದೇಗುಲವಿದ್ದು, ಎಲ್ಲ ದೇವರನ್ನು ಸಾಮರಸ್ಯದಿಂದ ಪೂಜಿಸಲಾಗುತ್ತದೆ. ಗ್ರಾಮದ ಸುತ್ತ ಹೇಮಾವತಿ ನಾಲೆ ನೀರು ಹರಿಯುತ್ತಿದೆ. ನಮ್ಮೂರಿನ ಯುವಕರು ಕುರಿ ಸಾಕಣೆಗೆ ಒತ್ತು ನೀಡಿ ತಳಿ ಅಭಿವೃದ್ಧಿ ಮಾಡುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.

ಚಂದ್ರು ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net