ಪಾಂಡವಪುರದಲ್ಲಿ 5ರಂದು ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾಹಿತಿ
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು
Published on: 

ಪಾಂಡವಪುರ: ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ವಿರುದ್ಧ ಅ.5ರಂದು ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ತಾಲೂಕು ಕಚೇರಿ ಹಾಗೂ ತಾಪಂ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಎಸಿ, ತಹಸೀಲ್ದಾರ್, ಆರ್‌ಐ, ವಿಎಗಳು ಸೇರಿದಂತೆ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾನೂನಿನ ಪ್ರಕಾರ ಪೌತಿ ಖಾತೆ ಮಾಡಿಕೊಡುವುದಕ್ಕೂ ಇಂತಿಷ್ಟು ಹಣವನ್ನು ಸಾರ್ವಜನಿಕರು, ರೈತರಿಂದ ವಸೂಲಾತಿ ಮಾಡುತ್ತಿದ್ದಾರೆ. ಜಾತಿ-ಆದಾಯ ಪ್ರಮಾಣ ಪತ್ರ ಮಾಡಿಸುವುದಕ್ಕೂ ಜನತೆ ಪರದಾಡುವ ಸ್ಥಿತಿ ಎದುರಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ತಾಪಂ ಇಒ ವೀಣಾ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಪೌತಿ ಖಾತೆ, ಇ-ಸ್ವತ್ತು ಮಾಡಿಕೊಡುವುದಕ್ಕೂ ಇಂತಿಷ್ಟು ಹಣ ಪಡೆಯುತ್ತಿದ್ದಾರೆ. ಕಚೇರಿಯಲ್ಲಿ ಕೂರುವುದಕ್ಕಿಂತ ಹೆಚ್ಚಾಗಿ ಕಚೇರಿಯ ಹಿಂಭಾಗ ಇರುವ ಸಭಾಂಗಣದಲ್ಲಿಯೇ ಹೆಚ್ಚು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಸಚಿವನಾಗಿದ್ದಾಗ ದುದ್ದ, ಬಳಘಟ್ಟ, ಶ್ಯಾದನಹಳ್ಳಿ, ಬಳೇಅತ್ತಿಗುಪ್ಪೆ, ಸುಂಕಾತೊಣ್ಣೂರು ಏತನೀರಾವರಿ ಯೋಜನೆ ಸೇರಿದಂತೆ ಮಲ್ಲಿಗೆರೆ ಏತನೀರಾವರಿ ಯೋಜನೆಯನ್ನೂ ಮೇಲ್ದರ್ಜೆಗೇರಿಸುವ ಮೂಲಕ ಕೆರೆಕಟ್ಟೆ ತುಂಬಿಸಲು ಕ್ರಮ ವಹಿಸಲಾಗಿತ್ತು. ಆದರೆ ಈಗ ಅಧಿಕಾರಿಗಳು ಕೆರೆಕಟ್ಟೆ ತುಂಬಿಸಿಲ್ಲ. ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಸಹ ಅಧಿಕಾರಿಗಳು ನಿಯಮಾನುಸಾರ ಕೆಲಸ ಮಾಡುತ್ತಿಲ್ಲ. ಎಕರೆಗೆ 2,500 ರೂ. ಬರ ಪರಿಹಾರ ಘೋಷಣೆ ಮಾಡಿರುವುದು ನಾಚಿಕೆಗೇಡಿನ ವಿಚಾರ ಎಂದು ಕಿಡಿಕಾರಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ರಾಜ್ಯ ಸರ್ಕಾರ ಪಡಿತರ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯ ಮಾಡಿರುವುದರಿಂದ ನೆಟ್‌ವರ್ಕ್, ಸರ್ವರ್ ಸಮಸ್ಯೆಗಳಿಂದಾಗಿ ಸರಿಯಾಗಿ ಇ-ಕೆವೈಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಅರಳಕುಪ್ಪೆ ಮಹದೇವು ಮಾತನಾಡಿ, ಸಕ್ಕರೆ, ಬೆಲ್ಲದ ಬೆಲೆ ಹೆಚ್ಚಾಗಿದ್ದರೂ ಸಹ ರೈತರ ಕಬ್ಬಿನ ಬೆಲೆ ಮಾತ್ರ ಹೆಚ್ಚಳ ಮಾಡುತ್ತಿಲ್ಲ. ಸಕ್ಕರೆ ಕಾರ್ಖಾನೆಯಲ್ಲಿ ಸರಿಯಾಗಿ ಪೇಮೆಂಟ್ ಮಾಡಲಾಗುತ್ತಿಲ್ಲ. 50 ರೂ. ಹೆಚ್ಚುವರಿ ಹಣ ನೀಡಿಲ್ಲ. ಭತ್ತಕ್ಕೆ ಸೂಕ್ತವಾದ ಬೆಲೆ ನಿಗದಿಪಡಿಸಿಲ್ಲ ಎಂದು ಕಿಡಿಕಾರಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ನಿರ್ದೇಶಕರಾದ ವಡ್ಡರಹಳ್ಳಿ ನಿಂಗೇಗೌಡ, ಆದರ್ಶ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಶ್ಯಾದನಹಳ್ಳಿ ಚಲುವರಾಜು, ಪುರಸಭೆ ಮಾಜಿ ಅಧ್ಯಕ್ಷರಾದ ಆರ್.ಸೋಮಶೇಖರ್, ಎಂ.ಗಿರೀಶ್, ಪಿ.ಎಸ್.ಲಿಂಗರಾಜು, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net