

ಕಿಕ್ಕೇರಿ: ಪಾಳೇಗಾರರ ಕಾಲದಲ್ಲಿ ಸೇನೆಯಲ್ಲಿ ಸೇನಾಧಿಪತಿಗಳಾಗಿದ್ದ ನೇಕಾರ ಕೇಶವಯ್ಯಶೆಟ್ಟಿ ವಠಾರದ ಲಕ್ಷ್ಮೀದೇವರ ಮನೆಯ ವಾರ್ಷಿಕ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು.
ಬ್ರಾಹ್ಮಿ ಮುಹೂರ್ತದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಸರೋವರದಲ್ಲ್ಲಿ ಗಂಗಾಪೂಜೆ ನೆರವೇರಿಸಿದರು. 5 ಕಳಸಗಳಲ್ಲಿ ದೇವಿ ಅವಾಹನೆ ಮಾಡಿಕೊಂಡು ಕಿಶೋರಿಯರ ತಲೆ ಮೇಲೆ ಹೊರಿಸಿ ಮಂಗಳವಾದ್ಯದೊಂದಿಗೆ ದೇವಿ ಗದ್ದುಗೆಗೆ ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ಹಸಿರು ಚಪ್ಪರ ನಿರ್ಮಿಸಿ, ಗದ್ದುಗೆಗೆ ಪರಿಮಳ ಪುಷ್ಪ, ವಸ್ತ್ರಾಭರಣಗಳ ಅಲಂಕಾರ ಮಾಡಿದರು.
5 ಕಳಸ, 5 ಬಳೆ ಬಿಚ್ಚೋಲೆ, 5 ರೇಷ್ಮೆ ಸೀರೆಗಳನ್ನು ಗದ್ದುಗೆಯಲ್ಲಿ ಇರಿಸಲಾಯಿತು. ದೇವಿಗೆ ಪ್ರಿಯವಾದ ಚಿಗಣಿ, ಬೆಲ್ಲದ ಅನ್ನ, ತಂಬಿಟ್ಟು, ಕಜ್ಜಾಯ, ವಿವಿಧ ಭಕ್ಷ್ಯ ಭೋಜನಗಳ ನೈವೇದ್ಯ ಸೇವೆ, ಮಾಂಸದ ಅಡುಗೆ ಸಮರ್ಪಣೆ ಮಾಡಿದರು. ಬಳಿಕ ಪಂಜಿನ ಸೇವೆ ಮಾಡಲಾಯಿತು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಾಮೂಹಿಕ ಪ್ರಸಾದ ಭೋಜನ ನಡೆಯಿತು.
ಕೇಶವಯ್ಯಶೆಟ್ಟಿ ವಠಾರದ ದಾಸಶೆಟ್ಟಿ, ರಂಗಶೆಟ್ಟಿ, ಚನ್ನಯ್ಯಶೆಟ್ಟಿ ವಠಾರದವರು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು.