ನಿರಾಶ್ರಿತರಿಗೆ ಶಕ್ತಿ ತುಂಬಲು ಧರ್ಮಸ್ಥಳ ಸಂಸ್ಥೆ ಮುಂದು

ಲೀಲಾವತಿ ಅಭಿಪ್ರಾಯ
ಕಿಕ್ಕೇರಿಯ  ನಿರಾಶ್ರಿತರಾದ ರೇಣುಕಾ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಭೂಮಿಪೂಜೆ ಬುಧವಾರ ನೆರವೇರಿಸಲಾಯಿತು. ಲೀಲಾವತಿ, ಕೆ.ಎಸ್.ಪ್ರಭಾಕರ್, ಕೆ.ಟಿ.ಪರಮೇಶ್, ಕೆ.ಬಿ.ಚಂದ್ರಶೇಖರ್, ಶಿವರಾಮೇಗೌಡ, ನಂದಿನಿ, ವಿಮಲಾ, ಯಶೋದಾ ಇತರರು ಇದ್ದರು.
ಕಿಕ್ಕೇರಿಯ ನಿರಾಶ್ರಿತರಾದ ರೇಣುಕಾ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಭೂಮಿಪೂಜೆ ಬುಧವಾರ ನೆರವೇರಿಸಲಾಯಿತು. ಲೀಲಾವತಿ, ಕೆ.ಎಸ್.ಪ್ರಭಾಕರ್, ಕೆ.ಟಿ.ಪರಮೇಶ್, ಕೆ.ಬಿ.ಚಂದ್ರಶೇಖರ್, ಶಿವರಾಮೇಗೌಡ, ನಂದಿನಿ, ವಿಮಲಾ, ಯಶೋದಾ ಇತರರು ಇದ್ದರು.
Published on: 

ಕಿಕ್ಕೇರಿ: ನಿರಾಶ್ರಿತರಿಗೆ ಶಕ್ತಿ ತುಂಬಿ ಎಲ್ಲರಂತೆ ಬದುಕಲು ಧರ್ಮಸ್ಥಳ ಸಂಸ್ಥೆ ಸದಾ ಮುಂದಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ ತಿಳಿಸಿದರು.

ಇಲ್ಲಿನ ಕೋಟೆ ಗಣಪತಿ ಬೀದಿಯಲ್ಲಿರುವ ನಿರಾಶ್ರಿತ ಮಹಿಳೆ ರೇಣುಕಾ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮನೆಯ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕಳೆದ ಐದು ವರ್ಷಗಳಿಂದ ಈ ವಾತ್ಸಲ್ಯ ಯೋಜನೆ ಕಾರ್ಯಕ್ರಮ ಆರಂಭಗೊಂಡಿದ್ದು, ಅಸಹಾಯಕರಿಗೆ ಮನೆ ಕಟ್ಟಿಕೊಡುವ, ಮಾಸಾಶನ ನೀಡುವ, ಮನೆ ದುರಸ್ತಿ ಮಾಡುವ, ಶೌಚಗೃಹ ನಿರ್ಮಾಣ, ದೈನಂದಿನ ಬಟ್ಟೆ ಕಿಟ್, ವಾತ್ಸಲ್ಯ ಕಿಟ್ ನೀಡುತ್ತಿದೆ. ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ಸದಸ್ಯರಿಗೆ ಮಾಸಾಶನ ನೀಡಿದೆ. ನಿರಾಶ್ರಿತರ ಸೋರುವ ಮನೆಗಳನ್ನು ದುರಸ್ತಿ ಮಾಡಲಾಗುವುದು ಎಂದು ಆತ್ಮಸ್ಥೈರ್ಯ ತುಂಬಿದರು.

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಏಕೈಕ ಗುರಿ ಸಂಸ್ಥೆಯದ್ದಾಗಿದೆ. ಗ್ರಾಮೀಣ ಪ್ರದೇಶದ ಜನರು ಸುಂದರ ಬದುಕು ಕಟ್ಟಿಕೊಳ್ಳಲು, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ವಿವಿಧ ಯೋಜನೆ ಮೂಲಕ ನೆರವು ನೀಡುತ್ತಿದೆ. ಆರೋಗ್ಯ, ಶಿಕ್ಷಣ, ಧಾರ್ಮಿಕ ದಾಸೋಹದ ಜತೆಗೆ ಆಶ್ರಯ ಯೋಜನೆಯನ್ನು ಶ್ರೀ ಕ್ಷೇತ್ರ ತಂದಿದೆ. ನಿರಾಶ್ರಿತರು ಭಯಪಡದೆ ನಿರಾತಂಕವಾಗಿ ಬದುಕಲು ಮುಂದಾಗಿ ಎಂದರು.

ತಾಲೂಕು ಯೋಜನಾಧಿಕಾರಿ ಬಿ.ಶ್ರೀನಿವಾಸ್ ಮಾತನಾಡಿ, ಸುಮಾರು 2 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ವಾತ್ಸಲ್ಯ ಮನೆ ನಿರ್ಮಿಸಲಾಗುತ್ತಿದೆ. ಹೋಬಳಿಯಲ್ಲಿ ಇದುವರೆಗೂ ನಿರಾಶ್ರಿತ ಅರ್ಹರನ್ನು ಗುರುತಿಸಿ 4 ವಾತ್ಸಲ್ಯ ಮನೆ ನೀಡಲಾಗಿದೆ. ಇದು ನಿರ್ಗತಿಕರ ನೆಮ್ಮದಿ ಬದುಕಿಗಾಗಿ ಆಯೋಜಿಸಿರುವ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರ ವಿಶೇಷ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದರು.

ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ, ಮೇಲ್ವಿಚಾರಕಿ ಯಶೋದಾ, ಸೇವಾ ಪ್ರತಿನಿಧಿ ಗೀತಾ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಗ್ರಾಪಂ ಮಾಜಿ ಅಧ್ಯಕ್ಷರಾದ ಕೆ.ಟಿ.ಪರಮೇಶ್, ಕೆ.ಬಿ.ಚಂದ್ರಶೇಖರ್, ಮುಖಂಡರಾದ ಶಿವರಾಮೇಗೌಡ, ಶಶಿ, ಸುಲೋಚನಾ, ವಿಮಲಾ ಇತರರು ಇದ್ದರು.