

ಕೆ.ಆರ್.ಪೇಟೆ: ಹೊಸ ಕಾಂಪೌಂಡ್ ನಿರ್ಮಾಣವಾಗಲಿದೆ ಎಂಬ ಆಸೆಯಲ್ಲಿ ಹಳೇ ತಡೆಗೋಡೆಯ ಅರ್ಧಭಾಗ ತೆರವುಗೊಳಿಸಿ ನಾಲ್ಕು ವರ್ಷ ಕಳೆದರೂ ಹೊಸ ಕಾಂಪೌಂಡ್ ನಿರ್ಮಾಣ ಮಾತ್ರ ಈವರೆಗೂ ಆಗಿಲ್ಲ.
ಕಾಮಗಾರಿಗೆ ಮಂಜೂರಾಗಿದ್ದ 1.55 ಕೋಟಿ ರೂ.ಅನುದಾನವೂ ಈ ನಡುವೆ ಸರ್ಕಾರಕ್ಕೆ ವಾಪಸ್ ಹೋಗಿದೆ. ಇದರಿಂದ ಹಣವೂ ಇಲ್ಲ, ಹೊಸ ಕಾಂಪೌಂಡೂ ಇಲ್ಲದೆ ತಾಲೂಕಿನ ಗವಿಮಠದ ವಸತಿ ಶಾಲೆ ಬಸವಳಿದಿದೆ.
2022ರಲ್ಲಿ ಗವಿಮಠದ ವಸತಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ 1.55 ಕೋಟಿ ರೂ.ಅನುದಾನ ಮಂಜೂರಾಗಿತ್ತು. ಇದರಲ್ಲಿ 1000 ಮೀಟರ್‌ಉದ್ದದ ಕಾಂಪೌಂಡ್, ಆಡಿಟೋರಿಯಂ ಹಾಗೂ ಶಾಲಾ ಆವರಣದಲ್ಲಿ 700 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು. ಕಾಮಗಾರಿ ಅನುಷ್ಠಾನದ ಜವಾಬ್ದಾರಿಯನ್ನು ಕೆಆರ್‌ಐಡಿಎಲ್ ಸಂಸ್ಥೆಗೆ ವಹಿಸಲಾಗಿತ್ತು. ಯೋಜನೆ ಜಾರಿಯಾಗುವ ನಿರೀಕ್ಷೆಯಲ್ಲಿ ಶಾಲೆಯ ಹಳೆಯ ಕಾಂಪೌಂಡ್‌ನ ಸುಮಾರು 500 ಮೀಟರ್ ಭಾಗವನ್ನೂ ತೆರವುಗೊಳಿಸಲಾಯಿತು. ಆದರೆ, ಆ ನಿರೀಕ್ಷೆ ನಾಲ್ಕು ವರ್ಷಗಳಾದರೂ ಈಡೇರಿಲ್ಲ.
ಹಳೆಯ ಕಾಂಪೌಂಡ್ ತೆರವುಗೊಳಿಸಿದ ಬಳಿಕ ಹೊಸ ಗೋಡೆ ನಿರ್ಮಿಸಬೇಕಿತ್ತು. ಆದರೆ, ತೆರವುಗೊಂಡ ಭಾಗದಲ್ಲಿ ಹೊಸ ಕಾಂಪೌಂಡ್ ನಿರ್ಮಾಣವಾಗದ ಕಾರಣ ಈಗ ಭದ್ರತೆ ಪ್ರಶ್ನೆ ಎದುರಾಗಿದೆ.
ಅನುದಾನ ವಾಪಸ್
ಮಂಜುರಾಗಿದ್ದ 1.55 ಕೋಟಿ ರೂ. ಅನುದಾನ ಸರ್ಕಾರಕ್ಕೆ ವಾಪಸ್ ಹೋದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ. ಹಳೆಯ ಕಾಂಪೌಂಡ್ ತೆರವುಗೊಳಿಸುವ ನಿರ್ಧಾರ ಹೇಗೆ ಕೈಗೊಳ್ಳಲಾಯಿತು? ಕಾಮಗಾರಿ ಮುಂದುವರಿಯದಿರುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿತ್ತೆ? ಅನುದಾನ ವಾಪಸ್ ಹೋಗುವ ಪರಿಸ್ಥಿತಿ ಎದುರಾಗಿದ್ದಾಗ ಅದನ್ನು ತಡೆಯಲು ಯಾವ ಪ್ರಯತ್ನ ನಡೆಯಿತು? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಇಂಜಿನಿಯರ್‌ಗಳ ಹೊಣೆ ಏನು?
ಕಾಂಪೌಂಡ್ ತೆರವುಗೊಂಡು ವರ್ಷಗಳಾದರೂ ಹೊಸ ಕಾಂಪೌಂಡ್ ನಿರ್ಮಾಣವಾಗಿಲ್ಲ. ಈಗ ಅನುದಾನ ವಾಪಸ್ ಆಗಿದೆ ಎಂದು ಹೇಳಿ ಸುಮ್ಮನಿರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹಳೆಯ ಕಾಂಪೌಂಡ್ ತೆರವುಗೊಂಡ ಬಳಿಕ ಶಾಲೆಯ ಭದ್ರತೆಗೆ ಉಂಟಾಗಿರುವ ಸಮಸ್ಯೆಯನ್ನು ಇಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ, ಸರ್ಕಾರದ ಗಮನಕ್ಕೆ ತಂದು ಹೊಸ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ.
ಆಡಿಟೋರಿಯಂ, ರಸ್ತೆಯೂ ಮರೀಚಿಕೆ
ಕಾಂಪೌಂಡ್ ಮಾತ್ರವಲ್ಲ, 1.55 ಕೋಟಿ ರೂ.ಯೋಜನೆಯಡಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕಿದ್ದ ಆಡಿಟೋರಿಯಂ ಹಾಗೂ 700 ಮೀಟಎ ಕಾಂಕ್ರೀಟ್ ರಸ್ತೆ ನಿರ್ಮಾಣದ ಉದ್ದೇಶವೂ ಈಡೇರಿಲ್ಲ. ಒಂದೇ ಯೋಜನೆಯಡಿ ಮೂರು ಪ್ರಮುಖ ಮೂಲಸೌಕರ್ಯ ಕಾಮಗಾರಿಗಳಿಗೆ ಅವಕಾಶವಿದ್ದರೂ ಅದರ ಪ್ರಯೋಜನ ವಿದ್ಯಾರ್ಥಿಗಳಿಗೆ ದೊರೆಯದಂತಾಗಿದೆ. ಯೋಜನೆ ವಿಫಲವಾದ ಬಳಿಕ ಅದರ ಅವಶ್ಯಕತೆ ಮುಗಿದಿಲ್ಲ. ವಿದ್ಯಾರ್ಥಿಗಳಿಗೆ ಸುರಕ್ಷಿತ ಆವರಣ, ಉತ್ತಮ ಸಂಚಾರ ವ್ಯವಸ್ಥೆ ಹಾಗೂ ಕಾರ್ಯಕ್ರಮಗಳಿಗೆ ಅಗತ್ಯ ಸ್ಥಳ ಇಂದಿಗೂ ಬೇಕಿದೆ.
ಈಗಾಗಲೇ ಮಂಜೂರಾಗಿದ್ದ ಅನುದಾನ ವಾಪಸ್‌ಹೋಗಿರುವುದರಿಂದ ಶಾಲೆಯ ಅಗತ್ಯ ಕಾಮಗಾರಿಗಳನ್ನು ಕೈಬಿಡುವುದು ಪರಿಹಾರವಲ್ಲ. ಹಳೆಯ ಕಾಂಪೌಂಡ್ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಇನ್ನಷ್ಟು ತುರ್ತು ಸ್ವರೂಪ ಪಡೆದಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಶಾಲೆಯ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಿ ಹೊಸದಾಗಿ ಅನುದಾನ ಮಂಜೂರು ಮಾಡಿಸಿ, ಮೊದಲು ತೆರವುಗೊಂಡಿರುವ ಕಾಂಪೌಂಡ್ ಭಾಗದಲ್ಲಿ ಹೊಸ ಗೋಡೆ ನಿರ್ಮಿಸಬೇಕು. ಬಳಿಕ ಆಡಿಟೋರಿಯಂ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೂ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಅನುದಾನ ವಾಪಸ್ ಹೋಗಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಯ ಹೊಣೆಗಾರಿಕೆಯೂ ವಾಪಸ್ ಹೋಗುವುದಿಲ್ಲ. ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಈಗ ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಾಗಿದೆ. ಕಳೆದ ನಾಲ್ಕು ವರ್ಷಗಳ ವಿಳಂಬದ ಸಂಪೂರ್ಣ ದಾಖಲೆ ಪರಿಶೀಲಿಸಿ, ಹೊಸದಾಗಿ ಅನುದಾನ ತರುವ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಕೆಲಸವನ್ನು ಇಂಜಿನಿಯರ್‌ಗಳು ತಕ್ಷಣ ಕೈಗೊಳ್ಳಬೇಕಿದೆ.
ಕಾಮಗಾರಿ ಅನುಮೋದನೆ ರದ್ದುಗೊಳಿಸಿ ಸರ್ಕಾರ ಅನುದಾನ ವಾಪಸ್ ಪಡೆದಿದೆ. ಹೀಗಾಗಿ ಪ್ರಸ್ತುತ ಇಲಾಖೆಯಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಹೊಸದಾಗಿ ಅನುಮೋದನೆ ಹಾಗೂ ಅನುದಾನ ದೊರೆತ ಬಳಿಕವಷ್ಟೇ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯ
ಸೋಮಶೇಖರ್ ಇಇ, ಕೆಆರ್‌ಐಡಿಎಲ್ ಸಂಸ್ಥೆ
ಹಳೇ ಕಾಂಪೌಂಡ್ ತೆರವುಗೊಳಿಸಿ ನಾಲ್ಕು ವರ್ಷ ಕಳೆದರೂ ಹೊಸ ಕಾಂಪೌಂಡ್ ನಿರ್ಮಾಣವಾಗಿಲ್ಲ. ವಸತಿ ಶಾಲೆಯಾಗಿರು ವುದರಿಂದ ಮಕ್ಕಳು ಶಾಲಾ ಆವರಣದಲ್ಲೇ ವಾಸವಿರುತ್ತಾರೆ. ಹೀಗಾಗಿ ಕಾಂಪೌಂಡ್ ಇಲ್ಲದಿರುವುದು ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ. ಹಿಂದಿನ ಯೋಜನೆಯ ಅನುಮೋದನೆ ರದ್ದಾಗಿ ಅನುದಾನ ವಾಪಸ್ ಹೋಗಿದೆ. ಆದರೆ ಇದರಿಂದ ಮಕ್ಕಳಿಗೆ ಅಗತ್ಯವಿರುವ ಕಾಂಪೌಂಡ್ ನಿರ್ಮಾಣದ ವಿಚಾರವನ್ನು ಕೈಬಿಡಬಾರದು. ಸರ್ಕಾರ ಕೂಡಲೇ ಹೊಸದಾಗಿ ಅನುದಾನ ಮಂಜೂರು ಮಾಡಿ ಕಾಂಪೌಂಡ್ ನಿರ್ಮಿಸಬೇಕು. ಉಳಿದ ಮೂಲಸೌಕರ್ಯ ಕಾಮಗಾರಿಗಳನ್ನೂ ಪೂರ್ಣಗೊಳಿಸಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು.
ಕುಮಾರ್ ಪಾಲಕ ಕಾಳೇಗೌಡನಕೊಪ್ಪಲು