

ಕಿಕ್ಕೇರಿ: ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹೋಬಳಿಯ ಸಾಸಲು ಗ್ರಾಮದಲ್ಲಿ ಇತ್ತೀಚೆಗೆ ಯುವಕರ ದಂಡಿನ ಸಗಣಿ ಓಕುಳಿ ಹಬ್ಬ ಆಚರಿಸಲಾಯಿತು.
ಕ್ಷೇತ್ರದ ಕಾರಣೀಕರ್ತೃವಾದ ಜಂಗಮ ಭೈರವರಾಜ ಹಾಗೂ ಶಿವನಿಗೆ ಭಕ್ತಿ ವಿಷಯದಲ್ಲಿ ಪಂಥ ನಡೆದು ಯುದ್ಧದಲ್ಲಿ ಶಿವನಿಗೆ ಸೋಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತಿಗೆ ಜಯವಾದಂತೆ ಜಂಗಮರು ಗೆಲುವು ಸಾಧಿಸುತ್ತಾರೆ. ಈ ಕುರುಹಾಗಿ ಕಾರ್ತಿಕ ಮಾಸದ ದೀಪಾವಳಿಯಂದು ಕಾರ್ತಿಕ ಮಾಸದ ಆರಂಭದ ಸಂಕೇತವಾಗಿ ಸಗಣಿ ಓಕುಳಿ ಹಬ್ಬ ನಡೆದುಕೊಂಡು ಬರುತ್ತಿದೆ.
ಗ್ರಾಮದ ರಥಬೀದಿಯ ರಂಗಸ್ಥಳದಲ್ಲಿ ಸಗಣಿ ಹಬ್ಬ ಆಚರಣೆಗೆ ಎರಡು ಬಣಗಳ ಯುವಕರ ಗುಂಪು ಸಜ್ಜಾದರು. ಶಿವನ ಬಣವಾಗಿ ವೀರಶೈವರ ಯುವಕರು, ಭಕ್ತ ಜಂಗಮ ಭೈರವರಾಜರ ಪರವಾಗಿ ಸಾಸಲು ಕೊಪ್ಪಲು ಗ್ರಾಮದ ಹಾಲುಮತ ಸಮುದಾಯದ ಯುವಕರು ಓಕುಳಿಯಾಟಕ್ಕೆ ಅಣಿಯಾದರು. ಎರಡು ಕಡೆಯ ಯುವಕರು ಸಗಣಿ ಕಾಳಗಕ್ಕಾಗಿ ಸಗಣಿಯನ್ನು ಒಂದೆಡೆ ಶೇಖರಣೆ ಮಾಡಿದರು. ಸುಮಾರು ಒಂದು ಎತ್ತಿನ ಗಾಡಿಯಷ್ಟು ಸಗಣಿ ಸಂಗ್ರಹಿಸಲಾಗಿತ್ತು. ಸಗಣಿಗೆ ಭಕ್ತರು ಹಾಗೂ ಯುವಕರ ಗುಂಪು ಪೂಜಿಸಿ ಸಗಣಿ ಕಾಳಗಕ್ಕೆ ಮುಂದಾದರು. ಹದವಾಗಿ ಉಂಡೆ ಕಟ್ಟಿಕೊಳ್ಳಲು ಸಗಣಿ ಕಾಲಿನಿಂದ ತುಳಿದರು. ಸಗಣಿ ನುಣುಪಾದ ನಂತರ ಸಣ್ಣ ಉಂಡೆಗಳನ್ನು ಕಟ್ಟಿಕೊಂಡು ಒಂದೆಡೆ ಕಲೆ ಹಾಕಿಕೊಂಡರು.
ಗ್ರಾಮದ ಹಿರಿಯ ಮುಖಂಡರು ಎರಡು ಗುಂಪಿನವರು ಹತ್ತಿರ ಬಾರದಂತೆ ಮಧ್ಯದಲ್ಲಿ ದೊಡ್ಡದಾದ ಬಿದಿರಿನ ಬೊಂಬನ್ನು ಅಡ್ಡಲಾಗಿ ಹಿಡಿದುಕೊಂಡರು. ಸೋಮೇಶ್ವರ, ಶಂಭುಲಿಂಗೇಶ್ವರ ದೇವರಿಗೆ ಜೈಕಾರ ಹಾಕಿದೊಡನೆ ಸಗಣಿ ಕಾಳಗಕ್ಕೆ ಚಾಲನೆ ದೊರೆಯಿತು. ಪರಸ್ಪರ ಸಗಣಿಯನ್ನು ಎರಡು ತಂಡಗಳು ಬಿರುಸಿನಿಂದ ಎದುರಾಳಿಗಳಿಗೆ ಬೀಸಿ ಬಡಿದಾಡಿಕೊಂಡರು.
ಕಾಕತಾಳೀಯ ಎನ್ನುವಂತೆ ಶಿವನ ಗುಂಪಿನವರು ಕಡಿಮೆ ಪ್ರಮಾಣದಲ್ಲಿ ಸಗಣಿ ಉಂಡೆಯನ್ನು ಜಂಗಮ ತಂಡಕ್ಕೆ ಬೀಸಿದರೆ, ಜಂಗಮ ಭೈರವರಾಜರ ಗುಂಪು ದೊಡ್ಡ ಪ್ರಮಾಣದಲ್ಲಿ ಸಗಣಿ ಉಂಡೆಯನ್ನು ಶಿವನ ಗುಂಪಿನ ಕಡೆಗೆ ಬೀಸಿದರು. ಶಿವನ ಗುಂಪಿನವರಿಗೆ ಹೆಚ್ಚು ಮೈ-ಕೈಗೆ ಸಗಣಿ ಮೆತ್ತಿಕೊಂಡಿತು. ಪರಿಣಾಮ ಸಾಂಪ್ರದಾಯಿಕ ಪದ್ಧತಿಯಂತೆ ಭಕ್ತ ಬಣದ ಜಂಗಮರ ಗುಂಪು ಜಯಶೀಲರಾದರು.
ಎರಡು ಗುಂಪಿನವರು ಸನಿಹದಲ್ಲಿರುವ ಸೋಮೇಶ್ವರ ಪುಷ್ಕರಿಣಿಯಲ್ಲಿ ಮಿಂದು ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು. ಸಗಣಿ ಹಬ್ಬವನ್ನು ನೋಡಲು ವಿವಿಧೆಡೆಯಿಂದ ಜನರು ಆಗಮಿಸಿದ್ದರು.