

ಶ್ರೀರಂಗಪಟ್ಟಣ: ಕ್ಷೇತ್ರದ ಜನರ ಶಕ್ತಿ ಕೇಂದ್ರ ತಾಲೂಕು ಕಚೇರಿ ಅವ್ಯವಸ್ಥೆ ಕಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅಧಿಕಾರಿಗಳನ್ನು ಸಾಮೂಹಿಕವಾಗಿ ತರಾಟೆ ತೆಗೆದುಕೊಂಡರು.
ತಾಲೂಕು ಕಚೇರಿಗೆ ಮಂಗಳವಾರ ಭೇಟಿ ನೀಡಿದ ಅವರು, ಇಲ್ಲಿನ ಶೌಚಗೃಹ, ಕುಡಿಯುವ ನೀರು, ವೃದ್ಧರು ಮತ್ತು ಅಂಗವಿಕಲರಿಗೆ ಕಲ್ಪಿಸಬೇಕಾದ ಮೂಲ ಸೌಕರ್ಯ ಕಲ್ಪಿಸದಿರುವುದು ಸೇರಿದಂತೆ ತಾಲೂಕು ಆಡಳಿತಾತ್ಮಕ ವಿಷಯಗಳ ಕುರಿತು ಅಧಿಕಾರಿ, ಸಿಬ್ಬಂದಿ ನಡೆಗೆ ಅಸಮಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿಯ ಸಾರ್ವಜನಿಕ ಸಹಾಯವಾಣಿಗೆ ತಹಸೀಲ್ದಾರ್ ಸಮ್ಮುಖದಲ್ಲೇ ಕರೆ ಮಾಡಿದ ನಾಗಲಕ್ಷ್ಮೀ ಚೌಧರಿ ಅವರಿಗೆ ಸಹಾಯವಾಣಿ ಅಸ್ತಿತ್ವದಲ್ಲಿರಲಿಲ್ಲ. ಈ ವೇಳೆ ತಾಲೂಕು ಆಡಳಿತ ಮುಜಗರಕ್ಕೀಡಾಯಿತು. ಬಳಿಕ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿ ಕುರಿತು ಆಂತರಿಕ ದೂರು ಸಮಿತಿ, ಅದರ ಅಧ್ಯಕ್ಷೆ ಹಾಗೂ ಸಮಿತಿಯ ಕಾರ್ಯ ನಿರ್ವಹಣೆ ಮತ್ತು ಎಷ್ಟು ಸಭೆಗಳು ನಡೆದಿದೆವೆ ಎಂಬುದರ ಕುರಿತು ಪ್ರಶ್ನಿಸಿದಾಗ ಉತ್ತರಿಸಲಾಗದ ಮಹಿಳಾ ಸಿಬ್ಬಂದಿ ತಡಬಡಾಯಿಸಿದರು.
ಯೋಜನೆಯ ಮಾಹಿತಿಯೇ ತಿಳಿದಿಲ್ಲ: ತಾಲೂಕು ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ವಿಧವೆಯರು, ಗಂಡನಿಂದ ದೂರವಾದ ಮಹಿಳೆಯರು, ವೃದ್ಧರು ಹಾಗೂ ನಿರ್ಗತಿಕರಿಗೆ ಕಲ್ಪಿಸಿಕೊಡುವ ಪ್ರಾಯೋಜಕತ್ವ ಯೋಜನೆ ಕುರಿತು ಪ್ರಶ್ನಿಸಿದ ನಾಗಲಕ್ಷ್ಮೀ ಚೌಧರಿ ಅವರಿಗೆ ಈ ಯೋಜನೆಯ ಮಾಹಿತಿಯೇ ತಿಳಿದಿಲ್ಲ ಎಂದ ಅಧಿಕಾರಿಯ ಉತ್ತರ ಅಚ್ಚರಿ ತಂದೊಡ್ಡಿತು. ಈ ಯೋಜನೆ ತಿಳಿಯದ ಅಧಿಕಾರಿ, ಸಿಬ್ಬಂದಿ ತಾಲೂಕಿನ ಫಲಾನುಭವಿಗಳಿಗೆ ಯಾವ ರೀತಿ ನ್ಯಾಯ ಸಲ್ಲಿಸುತ್ತೀರಿ? ಎಂದು ಕೆಲ ಕಾಲ ಪಾಠ ಮಾಡಿದ ಪ್ರಸಂಗಕ್ಕೂ ಸಭೆ ಸಾಕ್ಷಿಯಾಯಿತು.
ತಹಸೀಲ್ದಾರ್ಗೆ ತರಾಟೆ: ತಾಲೂಕು ಕಚೇರಿಯ ಅವ್ಯಸ್ಥೆ ಹಾಗೂ ಸಾರ್ವಜನಿಕರಿಗೆ ಕಲ್ಪಿಸಬೇಕಾದ ಸೇವೆಯಲ್ಲಿ ಉಂಟಾಗಿರುವ ಲೋಪಗಳ ಕುರಿತು ಆಡಳಿತ ಸಿಬ್ಬಂದಿ ಪರ ವಕಾಲತ್ತು ವಹಿಸಿ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಲು ಮುಂದಾದ ತಹಸೀಲ್ದಾರ್ ಚೇತನಾಯಾದವ್ ಅವರನ್ನು ನಾಗಲಕ್ಷ್ಮೀ ಚೌಧರಿ ತರಾಟೆ ತೆಗೆದುಕೊಂಡರು.
ಸಾರ್ವಜನಿಕರು ಹಾಗೂ ಮಹಿಳೆಯರಿಗೆ ಮೂಲಸೌಕರ್ಯ ಕಲ್ಪಿಸಲಾಗದ ಈ ತಾಲೂಕು ಕಚೇರಿಯನ್ನು ಬಂದ್ ಮಾಡುವುದು ಸೂಕ್ತ. ಆಡಳಿತಾತ್ಮಕ ವಿಚಾರದಲ್ಲಿ ಕನಿಷ್ಠ ಮಾಹಿತಿ ಹಾಗೂ ಮಾನವೀಯತೆ ನಡೆ ಹೊಂದದಿರುವುದು ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಯುತ ವೇತನ ನೀಡಿ: ತಾಲೂಕು ಕಚೇರಿಯಲ್ಲಿ ಹಲವು ವರ್ಷಗಳಿಂದ ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರಕಾರ್ಮಿಕ ಮಹಿಳೆ ಶಂಕರಮ್ಮ ಅವರನ್ನು ಅಧ್ಯಕ್ಷೆ ಖುದ್ಧು ಭೇಟಿ ಮಾಡಿ, ಆಕೆಯ ದಯನೀಯ ಸ್ಥಿತಿ ಕಂಡು ಕೈ ಹಿಡಿದು ಸ್ಥೈರ್ಯ ತುಂಬುವ ಮೂಲಕ ಮಾನವೀಯತೆ ಮೆರೆದರು.
ಶೌಚಗೃಹ ಸ್ವಚ್ಛಗೊಳಿಸುವ ಆಕೆಗೆ ವಿವಿಧ ಇಲಾಖೆಯಿಂದ ಚಂದ ಎತ್ತಿ, ಮಾಸಿಕ ನಾಲ್ಕು ಸಾವಿರ ರೂ. ನೀಡುತ್ತಿರುವ ವಿಚಾರ ತಿಳಿದು ಈ ಸಂಬಂಧ ಸ್ಥಳದಲ್ಲೇ ಇದ್ದ ತಹಸೀಲ್ದಾರ್ ಚೇತನಾಯಾದವ್ಅವರನ್ನು ಪ್ರಶ್ನಿಸಿದರು. ವೇತನ ಹಾಗೂ ಅವರಿಗೆ ಕಲ್ಪಿಸಿರುವ ಸೌಲಭ್ಯ ಕುರಿತು ನಮಗೆ ತಿಳಿದಿಲ್ಲ. ಏಜೆನ್ಸಿ ಮೂಲಕ ಹಣ ನೀಡಲಾಗುತ್ತಿದೆ ಎಂಬ ತತ್ಸಾರದ ಉತ್ತರಕ್ಕೆ ಸಿಡಿಮಿಡಿಗೊಂಡರು. ಭಿಕ್ಷೆ ಹಣ ನಿಲ್ಲಿಸಿ ಪೌರಕಾರ್ಮಿಕ ಮಹಿಳೆಯ ಕರ್ತವ್ಯ ಪರಿಗಣಿಸಿ, ನ್ಯಾಯಯುತ ವೇತನ ನೀಡಬೇಕಿರುವುದು ತಾಲೂಕು ಆಡಳಿತದ ಜವಾಬ್ದಾರಿ ಎಂದು ಎಚ್ಚರಿಸಿದರು.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಸತಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಮತ್ತು ಪರಿಸ್ಥಿತಿ ಕುರಿತಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೆ ತಾಲೂಕು ಕಚೇರಿಯ ಮೇಲ್ಮಹಡಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯನ್ನು ವೃದ್ಧರು, ಅಂಗವಿಕಲರು ಹಾಗೂ ರೋಗಿಗಳ ಅನುಕೂಲಕ್ಕಾಗಿ ಕೆಳಭಾಗಕ್ಕೆ ವರ್ಗಾವಣೆಗೊಳಿಸಿ, ವೀಲ್ಚೇರ್ ಕಲ್ಪಿಸಬೇಕು ಎಂದು ಸೂಚಿಸಿದರಲ್ಲದೆ, ತಾಲೂಕು ಕಚೇರಿಯಲ್ಲಿನ ಅವ್ಯವಸ್ಥೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಗೆ ಪತ್ರ ಬರೆದು ವರದಿ ನೀಡಲಾಗುವುದು ಎಂದರು.
ಗಣಂಗೂರು ಟೋಲ್ ಬಳಿ ಸ್ವಾಗತ: ಪಟ್ಟಣಕ್ಕೆ ಆಗಮಿಸುತ್ತಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರನ್ನು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ವತಿಯಿಂದ ಗಣಂಗೂರು ಟೋಲ್ ಬಳಿ ಸ್ವಾಗತಿಸಿ, ಸನ್ಮಾನಿಸಲಾಯಿತು.
ಈ ವೇಳೆ ಮಹಿಳಾ ಮತ್ತು ವಿವಿಧ ಸಂಘಟನೆಗಳ ಮುಖಂಡರಾದ ಎನ್. ಸರಸ್ವತಿ, ಆಶಾಲತಾ ಪುಟ್ಟೇಗೌಡ, ಶೀಲಾ ನಂಜುಂಡಯ್ಯ, ಮಂಜಳ, ಪವನ್, ವರದರಾಜ್, ಪುರಸಭಾ ಮಾಜಿ ಸದಸ್ಯ ಪ್ರಕಾಶ್, ಮಿಥುನ್ ಕುಮಾರ್, ಗಾಯತ್ರಿ ಹಾಗೂ ಸಂಸ್ಥೆಯ ಇತರೆ ಪದಾಧಿಕಾರಿಗಳು ಹೂಗುಚ್ಛ ನೀಡಿ ಬರಮಾಡಿಕೊಂಡರು.