

ಮದ್ದೂರು: ವಿದ್ಯಾರ್ಥಿಗಳು ಪಠ್ಯಕ್ರಮದ ಜತೆ ಆದರ್ಶಗಳನ್ನು ಮತ್ತು ಶಿಸ್ತು, ಸಂಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಪಾಲಕರು ಮತ್ತು ಗುರುಗಳು ಮೆಚ್ಚುವಂತಹ ರೀತಿಯಲ್ಲಿ ವಿದ್ಯೆ ಕಲಿಯಬೇಕು ಎಂದು ಕೊಪ್ಪ ಸರ್ವೋದಯ ಕಾಲೇಜಿನ ಪ್ರಾಂಶುಪಾಲ ಹನುಮಂತ ರಾಯಪ್ಪ ತಿಳಿಸಿದರು.
ತಾಲೂಕಿನ ಹೊಸಗಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಮಕ್ಕಳಲ್ಲಿ ಮೌಲ್ಯ ಮತ್ತು ಸಂಸ್ಕಾರ ಕುರಿತು ಉಪನ್ಯಾಸ ಮತ್ತು ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಏಕಾಗ್ರತೆಯಿಂದ ಧ್ಯಾನಸ್ಥರಾಗಿ ಮಕ್ಕಳು ಕಲಿಯಬೇಕು ಸಮಾಜಕ್ಕೆ ಉತ್ತಮ ಶಕ್ತಿಗಳಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಗಾಯಕ ಮತ್ತು ದಸಾಪ ಜಿಲ್ಲಾ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಮಾತನಾಡಿ, ಬುದ್ಧರ ಪ್ರೀತಿ ಮತ್ತು ಜ್ಞಾನ, ಬಸವಣ್ಣರ ದಯೆ ಕಾಯಕವೇ ಕೈಲಾಸ, ಅಂಬೇಡ್ಕರ್ ಅವರ ಪುಸ್ತಕ ಪ್ರೇಮ, ಸಮಾನತೆ, ಗಾಂಧಿಯವರ ಮನಃಪರಿವರ್ತನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಹುಜನರ ಅಭಿವೃದ್ಧಿ, ಪೆರಿಯಾ ಅವರ ವೈಚಾರಿಕ ಚಿಂತನೆ ಮತ್ತು ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆಯ ಶಿಕ್ಷಣ ಪ್ರೇಮ ದಂತ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ರಂಗಭೂಮಿ ಕಲಾವಿದೆ ಮಂಜುಳಾ ಆಲದಳ್ಳಿ ಮಾತನಾಡಿ, ನಾಡು, ನುಡಿ, ಕಲೆ ಸಾಹಿತ್ಯ ಕುರಿತು ನಾಡಿನಾದ್ಯಂತ ಕೆಲಸ ಮಾಡುತ್ತಿರುವ ಧಾರವಾಡ ವಿದ್ಯಾವರ್ಧಕ ಸಂಘವು ವಿದ್ಯಾರ್ಥಿಗಳಲ್ಲಿ ಆದರ್ಶಗಳನ್ನು ಬಿತ್ತುತ್ತಿದೆ ಎಂದ ಅವರು, ಅಬ್ರಾಹಂ ಲಿಂಕನ್ ಅವರ ಕಲಿಸು ಗುರುವೇ ಕಲಿಸು ಹಾಡನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅದರಲ್ಲಿನ ಮೌಲ್ಯಗಳನ್ನು ತಿಳಿಸಿದರು.
ಅಂತಾರಾಷ್ಟ್ರೀಯ ಗಾಯಕ ಪ್ರತಾಪ್ ಮತ್ತು ತಂಡ ಹಾಗೂ ಬಿಂದು ಮತ್ತು ತಂಡದವರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ನಿವೃತ್ತ ಎಎಸ್ಐ ಎಚ್.ಎಂ.ಕೃಷ್ಣ, ಮುಖ್ಯ ಶಿಕ್ಷಕ ಎಚ್.ಎಸ್ ಶಿವರಾಮ್, ಶಿಕ್ಷಕರಾದ ನಟರಾಜ, ಜಯಲಿಂಗು, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಗಂಗಾಧರ ರಾಯಶೆಟ್ಟಿಪುರ ಇದ್ದರು.