

ಪಾಂಡವಪುರ: ತಾಲೂಕಿನ ಜಯಂತಿ ನಗರದ ಶ್ರೀ ಶಂಭುಲಿಂಗೇಶ್ವರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಅ.29 ಮತ್ತು 30ರಂದು ಎರಡು ದಿನಗಳ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಎಂ.ಪಂಚಲಿಂಗೇಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಮಂಡ್ಯ ಹಾಗೂ ಶ್ರೀ ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿರುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಕ್ರೀಡಾಜ್ಯೋತಿ ಸ್ವೀಕರಿಸಲಿದ್ದು, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷ ಡಾ. ಮೂರ್ತಿ ಗೌರವ ಉಪಸ್ಥಿತಿ ಇರಲಿದ್ದಾರೆ. ಖೋ-ಖೋ ತರಬೇತುದಾರ ಕೆ.ಮಂಜುನಾಥ್ ಕುರುಬೂರು ಅವರು ಸಮಾರಂಭ ಉದ್ಘಾಟಿಸಲಿದ್ದು, ಶಾಸಕರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಎಚ್.ಟಿ.ಮಂಜು, ವಿವೇಕಾನಂದ, ಜಿಲ್ಲಾಧಿಕಾರಿ ಡಾ. ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ ಇತರರು ಹಾಜರಿರರುವರು ಎಂದು ವಿವಿರಿಸಿದರು.
ಜಿಲ್ಲೆ ಹಾಗೂ ತಾಲೂಕಿನ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಭಾಗವಹಿಸಲಿದ್ದು, ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳಿಂದ 2,500-3,000 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದ್ದು, ಬರುವ ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಪಾಂಡವಪುರ ಪಟ್ಟಣದಿಂದ, ರೈಲ್ವೆ ನಿಲ್ದಾಣ ಹಾಗೂ ಎಲೆಕೆರೆ ಹ್ಯಾಂಡ್ಪೋಸ್ಟ್ನಿಂದ ಸಾರಿಗೆ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಹಾಗಾಗಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ನೋಡಲ್ ಅಧಿಕಾರಿ ಹಾಗೂ ಪ್ರಾಂಶುಪಾಲ ರಾಮಕೃಷ್ಣೇಗೌಡ ಮಾತನಾಡಿ, ಶ್ರೀ ಶಂಭುಲಿಂಗೇಶ್ವರ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಪದವಿ ಕಾಲೇಜುಗಳ ಕ್ರೀಡಾಕೂಟದಲ್ಲಿ ಜಿಲ್ಲೆ ಎಲ್ಲ ಪದವಿಪೂರ್ವ ಕಾಲೇಜುಗಳಿಂದ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಂಯೋಜಕ ಎಸ್.ಎಂ.ಗುರುಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ಪಿ.ಅಕ್ಷಯ್, ತಾಲೂಕಿನ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು.