ಗೊಂಡೇನಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಅಮಾನತು

ಮಹಿಳೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಹಿನ್ನೆಲೆ ಡಿಸಿ ಆದೇಶ
ಮರಿಸ್ವಾಮಿ
ಮರಿಸ್ವಾಮಿ
Published on: 

ನಾಗಮಂಗಲ: ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಗೊಂಡೇನಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಮರಿಸ್ವಾಮಿ ಅವರನ್ನು ಜಿಲ್ಲಾಧಿಕಾರಿ ಡಾ. ಕುಮಾರ ಅಮಾನತುಗೊಳಿಸಿ ಸೆ.30 ರಂದು ಆದೇಶ ಹೊರಡಿಸಿದ್ದಾರೆ.

ಮಹಿಳೆಯೊಬ್ಬರಿಗೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಹಾಕಿ ಅತ್ಯಾಚಾರವೆಸಗಿ ನಂತರ ಆ ವಿಡಿಯೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಟ್ಟುಕೊಂಡು ಆಗಾಗ್ಗೆ ಬೆದರಿಕೆ ಹಾಕುತ್ತಿದ್ದರೆಂದು ಮಹಿಳೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಸೆ.19ರಂದು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಈ ಘಟನೆ ಕುರಿತು ತಹಸೀಲ್ದಾರ್ ಹಾಗೂ ನಾಗಮಂಗಲ ವೃತ್ತ ನಿರೀಕ್ಷಕರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನಾಧರಿಸಿ ಕ್ರಿಮಿನಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು 48 ಗಂಟೆ ಮೀರಿದಂತೆ ನ್ಯಾಯಾಂಗ ಬಂಧನದಲ್ಲಿದ್ದು ಇದುವರೆಗೂ ಜಾಮೀನು ಸಿಗದಿರುವುದನ್ನು ಉಲ್ಲೇಖಿಸಿ ಸೆ.30 ರಂದು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ಕುಮಾರ ಆದೇಶಿಸಿದ್ದಾರೆ.

ಅಮಾನತುಗೊಂಡ ಗ್ರಾಮ ಆಡಳಿತಾಧಿಕಾರಿಯ ಲೀನ್‌ಅನ್ನು ಮಳವಳ್ಳಿ ತಾಲೂಕಿನ ದ್ಯಾವಪಟ್ಟಣ ವೃತ್ತಕ್ಕೆ ಸ್ಥಳಾಂತರಿಸಿದ್ದಾರೆ. ಈ ಸಂದರ್ಭ ಸಕ್ಷಮದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಆರೋಪಿ ಬಿಡುವಂತಿಲ್ಲವೆಂದು ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net