

ಶ್ರೀರಂಗಪಟ್ಟಣ: ಪಟ್ಟಣ ಪುರಸಭೆ ಮುಂಭಾಗದ ಬಂಡಿಸಿದ್ದೇಗೌಡ ವೃತ್ತದಲ್ಲಿ ಗುರುವಾರ ಶ್ರೀ ಪಂಚಮುಖಿ ವಿನಾಯಕ ಗೂಡ್ಸ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕ, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ತಮ್ಮ ನಿತ್ಯದ ಕಾಯಕದ ಜತೆಗೆ ತಾಯಿ ನೆಲದ ಗೌರವ ಅಭಿಮಾನದಿಂದ ನಮ್ಮ ಸಹೋದರರು ವಿಜೃಂಭಣೆಯ ರಾಜ್ಯೋತ್ಸವ ಆಚರಿಸುತ್ತಿದ್ದು, ಜತೆಗೆ ರಕ್ತದಾನ ಶಿಬಿರ, ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣೆಯ ಶಿಬಿರ ನಡೆಸುತ್ತಿರುವುದು ಸಂತಸದಾಯಕ ವಿಚಾರ. ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯ ಮೇಲಿನ ನಿಮ್ಮ ಅಭಿಮಾನ ಅಭಿನಂದನೆ ಎಂದರು.
ರೈತನ ಹೊಲದಿಂದ ವ್ಯಾಪಾರಿಯ ಅಂಗಡಿಯವರೆಗೆ, ಕಾರ್ಖಾನೆಯಿಂದ ಗ್ರಾಹಕರ ಮನೆ ಬಾಗಿಲಿನವರೆಗೆ ಸರಕುಗಳನ್ನು ತಲುಪಿಸುವಲ್ಲಿ ಗೂಡ್ಸ್ ಆಟೋ ಚಾಲಕರ ಪಾತ್ರ ಬಹಳ ದೊಡ್ಡದು. ನಿಮ್ಮ ದುಡಿಮೆ ಕೇವಲ ನಿಮ್ಮ ಕುಟುಂಬದ ಜೀವನ ನಿರ್ವಹಣೆಗೆ ಮಾತ್ರ ಸೀಮಿತವಾಗಿಲ್ಲ. ಸಮಾಜದ ಆರ್ಥಿಕ ಚಟುವಟಿಕೆಗೂ ನಿಮ್ಮ ಶ್ರಮ ದೊಡ್ಡ ಕೊಡುಗೆ ನೀಡುತ್ತಿದೆ. ಬಿಸಿಲು-ಮಳೆ ಎನ್ನದೆ ದುಡಿಯುವ ನಿಮ್ಮ ಸೇವೆಯನ್ನು ಸಮಾಜ ಗುರುತಿಸಬೇಕು ಎಂದು ಹೇಳಿದರು.
ಪಂಚಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಲ್.ದಿನೇಶ್ ಮಾತನಾಡಿದರು. ಇದಕ್ಕೂ ಮೊದಲು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಾರ್ವಜನಿಕರಿಗೆ ಖುದ್ದು ಅನ್ನಸಂತರ್ಪಣೆಯೊಂದಿಗೆ ಸಿಹಿ ವಿತರಿಸಿದ್ದು, ಇತರ ಗಣ್ಯರು ಸಹ ಜತೆಯಾದರು. ಪುರಸಭಾ ಮಾಜಿ ಸದಸ್ಯ ಎಸ್.ಪ್ರಕಾಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಜನಿಕಾಂತ್, ಮುಖಂಡ ಸುರೇಶ್, ಅಭಿಷೇಕ್, ರುಕ್ಮಾಂಗದ, ಗೂಡ್ಸ್ ಆಟೋ ಸಂಘದ ಅಧ್ಯಕ್ಷ ಎನ್.ಕಿರಣ್ ಕುಮಾರ್, ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಆದರ್ಶ ಖಜಾಂಚಿ ಮನು, ಪದಾಧಿಕಾರಿಗಳಾದ ಬಾಬಣ್ಣ, ಸ್ವಾಮಿ, ಪರಮೇಶ್, ಹರೀಶ, ಆಟೋ ಮುಜೀಬ್ ಇತರರು ಈ ವೇಳೆ ಇದ್ದರು.