ಗಂಗಾಧರೇಶ್ವರನ ಮಹಿಮೆ ಅಪಾರ

ಚೀಕನಹಳ್ಳಿಯಲ್ಲಿರುವ ದೇವಾಲಯ
temple shiva lordshiva
ಪಾಂಡವಪುರ ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿರುವ ಗಂಗಾಧರಶ್ವೇರಸ್ವಾಮಿ ದೇವಸ್ಥಾನದ ಹೊರನೋಟ.#temple #shivatemple #lordshiva
Published on: 

ಪಾಂಡವಪುರ: ಮೂಡಿದ ಸ್ಥಳದಲ್ಲಿಯೇ ನೆಲೆಗೊಂಡಿರುವ ಗಂಗಾಧರೇಶ್ವರ ಹಾಲು, ಮೊಸರು ನೈವೇದ್ಯಕ್ಕೆ ತೃಪ್ತನಾಗಿ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಮೂಲಕ ಆರಾಧ್ಯ ದೈವನಾಗಿನೆಲೆ ನಿಂತಿದ್ದಾನೆ.

ಕಷ್ಟ ಎಂದು ಭಕ್ತಿಯಿಂದ ಕೈಮುಗಿದು ಪ್ರಾರ್ಥಿಸಿದರೆ ಇಷ್ಟಾರ್ಥಗಳನ್ನು ಗಂಗಾಧರೇಶ್ವರ ನೆರವೇರಿಲಿದ್ದಾನೆ ಎಂಬುದು ಅಪಾರ ಭಕ್ತರ ಅಚಲ ನಂಬಿಕೆ. ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಲಿಂಗ ರೂಪದಲ್ಲಿ ನೆಲೆಸಿರುವ ಗಂಗಾಧರೇಶ್ವರ ಈ ಭಾಗದ ಸುತ್ತಮುತ್ತಲ ಗ್ರಾಮಗಳ ಭಕ್ತರ ಬೇಡಿಕೆಗಳಿಗೆ ಅಸ್ತು ಎನ್ನುತ್ತ ಸಂಕಷ್ಟಹರನಾಗಿ ಪೂಜಿಸಲ್ಪಡುತ್ತಿದ್ದಾನೆ. ಕಷ್ಟಗಳ ಪರಿಹಾರಕ್ಕಾಗಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ನೆರವೇರಿಸಿ ಹಾಲು, ಮೊಸರು ನೈವೇದ್ಯ ಮಾಡಿದರೆ ಎಂತಹ ಕಷ್ಟವಾದರೂ ಮಂಜಿನಂತೆ ಕರಗುತ್ತದೆ ಎಂಬುದು ಗಂಗಾಧರೇಶ್ವರನ ಅಸಂಖ್ಯಾತ ಭಕ್ತರ ಅಚಲವಾದ ನಂಬಿಕೆ. ನಿಷ್ಕಲ್ಮಶ, ಭಕ್ತಿಯಿಂದ ಕೈಮುಗಿದು ಪ್ರಾರ್ಥಿಸಿದರೆ ಭಕ್ತರ ನಂಬಿಕೆಗಳು ಹುಸಿಯಾಗದಂತೆ ಅವರ ಕಷ್ಟಗಳಿಗೆ ಪರಿಹಾರ ನೀಡಿ ಕೈ ಹಿಡಿದು ಕಾಪಾಡುತ್ತಾನೆ ಎಂಬ ಸತ್ಯ ಶಿವನ ಅಗಣಿತ ಭಕ್ತರ ಮನಸ್ಸಿನಲ್ಲಿ ನೆಲೆಯೂರಿದೆ.

ಭಕ್ತರಿಂದ ದೇವಸ್ಥಾನ ನಿರ್ಮಾಣ: ಗ್ರಾಮದ ಮೋಟೇಗೌಡ ಅವರ ಜಮೀನಿನಲ್ಲಿ ಮೂಡಿದ ದೈವಸ್ವರೂಪಿ ಹುತ್ತ ಗ್ರಾಮಸ್ಥರಿಂದ ಪೂಜಿಸಲ್ಪಡುತ್ತಿತ್ತು. ಹುತ್ತ ಮತ್ತು ಅಲ್ಲಿ ನಡೆಯುತ್ತಿರುವ ಮಹಿಮೆಗಳ ಬಗ್ಗೆ ಪುರೋಹಿತರಲ್ಲಿ ವಿಚಾರಿಸಿದಾಗ ಹುತ್ತ ಮೂಡಿರುವ ಸ್ಥಳದಲ್ಲಿ ಬಹಳ ಹಿಂದೆ ಗಂಗಾಧರೇಶ್ವರಸ್ವಾಮಿ ದೇವಸ್ಥಾನವಿದ್ದು, ಕಾಲಕ್ರಮೇಣ ಅದು ಮುಚ್ಚಿಹೋದ ಪರಿಣಾಮ ಗಂಗಾಧರೇಶ್ವರ ಹುತ್ತದ ರೂಪದಲ್ಲಿ ಮೂಡಿದ್ದಾನೆ. ಹುತ್ತದ ರೂಪದಲ್ಲಿ ನೆಲೆನಿಂತಿರುವ ಗಂಗಾಧರನಿಗೆ ಈ ಸ್ಥಳದಲ್ಲೇ ದೇವಸ್ಥಾನ ನಿರ್ಮಾಣ ಮಾಡಿ ಆರಾಧಿಸಿದರೆ ಆತನ ಅನುಗ್ರಹದಿಂದ ಗ್ರಾಮಸ್ಥರು ಸೇರಿಂದತೆ ಅಪಾರ ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಸಿಗುತ್ತದೆ ಎಂದು ಸಲಹೆ ನೀಡಿದರಂತೆ. ಪುರೋಹಿತರ ಸಲಹೆಯಂತೆ ಗ್ರಾಮದ ಮೋಟೇಗೌಡರು ಮತ್ತು ಕರೀಗೌಡರು ಮತ್ತವರ ಮಕ್ಕಳು ಹುತ್ತ ಮೂಡಿದ ಸ್ಥಳದಲ್ಲಿ ಮೊದಲು ಗದ್ದುಗೆ ನಿರ್ಮಾಣ ಮಾಡಿ ಅನೇಕ ವರ್ಷಗಳ ಕಾಲ ಪೂಜೆ ನೆರವೇರಿಸಿದ್ದಾರೆ. ಬಳಿಕ ಮೋಟೇಗೌಡರ ಮತ್ತು ಕರೀಗೌಡರ ಮಕ್ಕಳು ಸೇರಿದಂತೆ ಗ್ರಾಮದ ಕೆಲ ಭಕ್ತರು ಒಗ್ಗೂಡಿ ಗಂಗಾಧರನಿಗೆ ಗುಡಿ ಕಟ್ಟಿ ಪೂಜಿಸುತ್ತಿದ್ದಾರೆ.

ನೇಪಾಳದಿಂದ ತಂದಿರುವ ಲಿಂಗ: ಲಿಂಗಸ್ವರೂಪದಲ್ಲಿ ನೆಲೆನಿಂತಿರುವ ಗಂಗಾಧರೇಶ್ವರಸ್ವಾಮಿ ಲಿಂಗಮೂರ್ತಿಯನ್ನು ವಿನಯ್ ಗುರೂಜಿ ಅವರ ಸಲಹೆ ಮತ್ತು ಸಹಕಾರದಂತೆ ಖುದ್ದು ನೇಪಾಳದ ಗಂಡಕ್ಕಿ ನದಿ ಸಮೀಪದಿಂದ ಗಂಗಾಧರೇಶ್ವರಸ್ವಾಮಿಯ ಲಿಂಗ ರೂಪವನ್ನು ತರಿಸಲಾಗಿದೆ. ತಮಿಳುನಾಡಿನ ಶಿವಾರಪಟ್ಟಣದ ಶಿಲ್ಪಿಗಳು ದೇವರ ಪೀಠವನ್ನು ನಿರ್ಮಿಸಿದ್ದು, ಇತ್ತೀಚೆಗಷ್ಟೇ ದೇವಸ್ಥಾನ ನಿರ್ಮಾಣ ಕೆಲಸ ಪೂರ್ಣಗೊಂಡು ಸಕಲ ಶಾಸ್ತ್ರಗಳೊಂದಿಗೆ ಗಂಗಾಧರೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ಹುತ್ತವಾಗಿ, ಗದ್ದುಗೆಯಾಗಿ ಲಿಂಗಸ್ವರೂಪಿಯಾಗಿ ಪೂಜಿಸಲ್ಪಡುತ್ತಿರುವ ಗಂಗಾಧರೇಶ್ವರಸ್ವಾಮಿ ತನ್ನ ಅಪಾರ ಭಕ್ತರನ್ನು ಕಾಯುತ್ತಿದ್ದಾನೆ.

48 ದಿನ ಅನ್ನಸಂತರ್ಪಣೆ: ದೇವರು ಪ್ರತಿಷ್ಠಾಪನೆಗೊಂಡ ಬಳಿಕ 48 ದಿನಗಳ ಕಾಲ ಚೀಕನಹಳ್ಳಿ, ಮೂಡಲಕೊಪ್ಪಲು ಮತ್ತು ಹಳೇಬೀಡು ಗ್ರಾಮಸ್ಥರು ಸೇರಿ ನಿರಂತರವಾಗಿ ಸುಮಾರು ಮೂರರಿಂದ ನಾಲ್ಕು ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದ್ದಾರೆ. ಇಷ್ಟು ದಿನಗಳ ಕಾಲ ನಿರಂತರವಾಗಿ ಅನ್ನಸಂತರ್ಪಣೆ ನಡೆದಿರುವುದರಿಂದ ದೇವರ ಕೃಪೆಯಿಂದ ಈವರೆಗೂ ಯಾವುದೇ ತೊಂದರೆ ಆಗಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗುತ್ತಿದೆ. ದೇವರ ಕೃಪೆ ಇಲ್ಲದಿದ್ದರೆ ಅಷ್ಟು ದಿನಗಳ ಕಾಲ ಅನ್ನಸಂತರ್ಪಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಸೋಮವಾರ, ಶಿವರಾತ್ರಿಯಂದು ವಿಶೇಷ ಪೂಜೆ: ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಕರುಣಾಮಯಿಯಾಗಿ ನೆಲೆನಿಂತಿರುವ ಗಂಗಾಧರೇಶ್ವರಸ್ವಾಮಿಗೆ ಶಿವರಾತ್ರಿ ಹಬ್ಬದಂದು ಮುಂಜಾನೆಯಿಂದ ರಾತ್ರಿವರೆಗೂ ವಿಶೇಷ ಪೂಜೆ ನೆರವೇರಲಿದೆ. ಪ್ರತಿ ಸೋಮವಾರ ಹರಕೆ ಹೊತ್ತ ಭಕ್ತರು ದೇವರಿಗೆ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿ ನೈವೇದ್ಯ ಮಾಡುತ್ತಾರೆ.

ಗಂಗಾಧರೇಶ್ವರ ಸ್ವಾಮಿಗೆ ಪ್ರತಿದಿನ ಗ್ರಾಮದ ಚನ್ನೇಗೌಡರ ಮಗ ಚರಣ್‌ಗೌಡ ಅವರು ಪೂಜೆ ನೆರವೇರಿಸುತ್ತಿದ್ದಾರೆ. ಅದಕ್ಕಾಗಿ ಕೆಲವು ತ್ಯಾಗಗಳನ್ನು ಮಾಡಬೇಕು ಎಂಬುದನ್ನು ಮನಗಂಡಿರುವ ಚರಣ್‌ಗೌಡ ಅವರು ಮಾಂಸಾಹಾರ ತ್ಯಜಿಸಿದ್ದಾರೆ. ಇವರೇ ದೇವಸ್ಥಾನದ ಪುರೋಹಿತರಾಗಿದ್ದು ಯುವಕನಾದರೂ ದೇವರ ಸೇವೆಯನ್ನು ಭಕ್ತಿಯಿಂದ ಮಾಡುತ್ತಿದ್ದಾರೆ.

ಗಂಗಾಧರೇಶ್ವರಸ್ವಾಮಿ ಇಲ್ಲಿ ನೆಲೆ ನಿಂತಾಗನಿಂದಲೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಹೊರ ಜಿಲ್ಲೆಗಳಿಂದ ಬರುವ ಅಸಂಖ್ಯೆ ಭಕ್ತರ ಕಷ್ಟ ದೇವರ ಪ್ರಾರ್ಥನೆಯಿಂದ ಕರಗಿಹೋಗಿದೆ. ಶುದ್ಧ, ನಿಷ್ಕಲ್ಮಶ ಭಕ್ತಯಿಂದ ಶಿವನನ್ನು ಪ್ರಾರ್ಥಿಸಿದರೆ ಕಲ್ಲಿನಂತ ಕಷ್ಟಗಳು ಮಂಜಿನಂತೆ ಕರಗುತ್ತದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವನೆಯಿಂದ ದೇವರನ್ನು ಆರಾಧಿಸುತ್ತಿದ್ದೇನೆ. ನಾವು ನಂಬಿದ ದೇವರು ನಮ್ಮನ್ನು ಎಂದೂ ಕೈಬಿಡುವುದಿಲ್ಲ.

> ಚರಣ್‌ಗೌಡ ದೇವಸ್ಥಾನದ ಅರ್ಚಕ