

ಪಾಂಡವಪುರ: ಕ್ರೀಡೆಯಲ್ಲಿ ತಾರತಮ್ಯವಿಲ್ಲ, ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸೋಲು-ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಕಿವಿಮಾತು ಹೇಳಿದರು.
ತಾಲೂಕಿನ ಜಯಂತಿ ನಗರದ ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮಂಡ್ಯ ಹಾಗೂ ಶ್ರೀ ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್‌ನಿಂದ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಸಾಧಕರ ಸ್ವತ್ತು, ಇಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ. ಪ್ರತಿಭೆ ಹೊಂದಿರುವವರು ಸಾಧನೆ ಮಾಡಬಹುದಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕೆಂಚಗಾರಕೊಪ್ಪಲು ಗ್ರಾಮದ ಶಿಲ್ಪಾ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದು, ದೇಶಕ್ಕೆ ಕೀರ್ತಿ ತಂದಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಹೊರತೆಗೆಯುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯೂ ಕಳೆದ ಎರಡು ವರ್ಷಗಳಿಂದಲೂ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಆಯೋಜಿಸಿ ಕ್ರೀಡಾಪಟುಗಳಿಗೆ ಬೇಕಿರುವ ಸೌಲಭ್ಯ ಒದಗಿಸುತ್ತಿದೆ ಎಂದರು.
ಪದವಿ ಪೂರ್ವ ಉಪನಿರ್ದೇಶಕ ಪ್ರಸನ್ನಕುಮಾರ್ ಮಾತನಾಡಿ, ಕ್ರೀಡಾಕೂಟಗಳು ಯುವ ಜನರನ್ನು ಸಂಘಟಿಸುವ ಸಾಧನವಾಗಿವೆ. ಕ್ರೀಡಾಕ್ಷೇತ್ರದ ಬಗ್ಗೆ ಹಲವಾರು ಸಂಶೋಧಕರು ಅನೇಕ ಸಂಶೋಧನೆ ಮಾಡಿದ್ದಾರೆ. ಪ್ರಸಿದ್ಧ ವೈದ್ಯ ಚೌಧರಿ ನಡೆಸಿದ ಸಂಶೋಧನೆ ಪ್ರಕಾರ ವಿದ್ಯಾರ್ಥಿಗಳು ಗಾಂಜಿನ ಬಂಡೆಯಂತಾಗಿದ್ದಾರೆ. ಪಾಲಕರು ಸಹ ಮಕ್ಕಳನ್ನು ಕಣ್ಣಿನ ರಪ್ಪೆಯಂತೆ ನೋಡಿಕೊಳ್ಳುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದರು.
ಎಂಎಲ್ ಸಿ ವಿವೇಕನಂದ ಅವರು ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು.
ಸಂಸ್ಥೆಯ ಅಧ್ಯಕ್ಷ ಪಿ.ಹೊನ್ನರಾಜು, ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ.ಎಂ.ಪಂಚಲಿಂಗೇಗೌಡ, ಕಾರ್ಯದರ್ಶಿ ಪಿ.ಅಕ್ಷಯ್, ನೋಡಲ್ ಅಧಿಕಾರಿ ಎಚ್.ಎನ್.ರಾಮಕೃಷ್ಣೇಗೌಡ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಆರ್.ಎಂ.ಚನ್ನಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ಹನುಮಂತಯ್ಯ, ಜಿಲ್ಲಾ ಸಂಯೋಜಕ ಎಸ್.ಎಂ.ಗುರುಸ್ವಾಮಿ,ಮರೀಗೌಡ, ದೈಹಿಕಪರಿವೀಕ್ಷಕ ಶ್ರೀನಿವಾಸ್, ಎಂ.ಮಹೇಶ್, ಸಂಸ್ಥೆಯ ತಾಂತ್ರಿಕ ನಿರ್ದೇಶಕ ಧನರಾಜ್ ಪಿ., ಪ್ರಾಂಶುಪಾಲೆ ಸೌಮ್ಯಾ, ಕೆ.ಕುಬೇರ್, ಬಾಲಚಂದ್ರ ಇತರರು ಇದ್ದರು.