ನೀರಿನ ಬವಣೆ ನೀಗಿಸಲು ಖಾಸಗಿ ಕೊಳವೆ ಬಾವಿ ಆಶ್ರಯಿಸಿ

ಅಧಿಕಾರಿಗಳಿಗೆ ಶಾಸಕ ಎಚ್.ಟಿ.ಮಂಜು ಸೂಚನೆ
ಕೆ.ಆರ್.ಪೇಟೆ
ಕೆ.ಆರ್.ಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ಕುಡಿಯುವ ನೀರು ಟಾಸ್ಕ್‌ಫೋರ್ಸ್ ಸಭೆ ಆಯೋಜಿಸಲಾಗಿತ್ತು.
Published on: 

ಕೆ.ಆರ್.ಪೇಟೆ: ತಾಲೂಕಿನಲ್ಲಿ ಕುಡಿಯುವ ನೀರು ಪೂರೈಸಲು ಹಣಕಾಸಿನ ಕೊರತೆಯಿಲ್ಲ. ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅಂತರ್ಜಲ ಮಟ್ಟ ಕುಸಿದಿರುವ ಕಡೆ ರೈತರ ಖಾಸಗಿ ಕೊಳವೆ ಬಾವಿಗಳಿಂದಲೂ ನೀರು ಪಡೆಯಲು ಕ್ರಮ ವಹಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಕುಡಿಯುವ ನೀರು ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೇಮಾವತಿ ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರು ಹರಿಸುತ್ತಿರುವುದರಿಂದ ಹಲವು ಭಾಗಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದ್ದು, ಇದರಿಂದ ಸದ್ಯಕ್ಕೆ ಕೆಲವು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಿದೆ. ಆದರೆ, ವಿದ್ಯುತ್ ವ್ಯತ್ಯಯ ಹಾಗೂ ಜಲಜೀವನ್ ಮಿಷನ್ ಕಾಮಗಾರಿಗಳಲ್ಲಿನ ಲೀಕೇಜ್‌ನಿಂದ ಕೆಲವೆಡೆ ನೀರು ಪೂರೈಕೆಗೆ ತೊಂದರೆ ಆಗುತ್ತಿದೆ ಎಂದರು.

ಟಿ.ಸಿ. ಅಳವಡಿಸಲು ಅಡ್ಡಿ: ನಾಟನಹಳ್ಳಿ ಸಮೀಪದ ಕುಡಿಯುವ ನೀರು ಪೂರೈಕೆ ಜಾಲಕ್ಕೆ ಹೊಸ ಟಿ.ಸಿ. ಅಳವಡಿಸಬೇಕಿದ್ದು, ವಿದ್ಯುತ್ ನಿಗಮ ಸಹಕರಿಸುತ್ತಿಲ್ಲ ಎಂದು ಪಿಡಿಒಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಎಚ್.ಟಿ.ಮಂಜು, ಸ್ಥಳದಲ್ಲಿಯೇ ಸೆಸ್ಕ್ ಮೇಲಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಅಗತ್ಯ ವಿದ್ಯುತ್ ಸಂಪರ್ಕ ಹಾಗೂ ಟಿಸಿ ಅಳವಡಿಕೆಯಲ್ಲಿ ನಿಯಮಾನುಸಾರ ಸಹಕರಿಸುವಂತೆ ಸ್ಥಳೀಯ ಸೂಚಿಸುವಂತೆ ತಿಳಿಸಿದರು.

2 ಕಿಮೀ ಬಿಳಿ ವಯರ್ !: ನಾಡಬೋಗನಹಳ್ಳಿ ಗ್ರಾಮಕ್ಕೆ ಸುಮಾರು 2 ಕಿಮೀ ದೂರ ಬಿಳಿ ವಯರ್ ಅಳವಡಿಸಿಕೊಂಡು ವಿದ್ಯುತ್ ಸಂಪರ್ಕ ಪಡೆದು ಕುಡಿಯುವ ನೀರು ಪೂರೈಸುತ್ತಿರುವುದು ಸಭೆಯಲ್ಲಿ ಬೆಳಕಿಗೆ ಬಂತು. ಇಂತಹ ಅಪಾಯಕಾರಿ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅಥವಾ ಅನಾಹುತ ಸಂಭವಿಸಿದರೆ ಸಂಬಂಧಿಸಿದ ಸೆಸ್ಕ್ ಇಂಜಿನಿಯರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಶಾಸಕರು ಎಚ್ಚರಿಸಿದರು.

ಬಡಾವಣೆಗಳಿಗೆ ನೀರು: ಪಟ್ಟಣದ ಹೊರವಲಯದ ಹೌಸಿಂಗ್ ಬೋರ್ಡ್ ಕಾಲನಿ, ಸಾದುಗೋನಹಳ್ಳಿ ಶಿಕ್ಷಕರ ಕಾಲನಿ ಹಾಗೂ ನಾಗೇನಹಳ್ಳಿ ಗಡಿ ವ್ಯಾಪ್ತಿಯ ಬಡಾವಣೆಗಳ ಕುಡಿಯುವ ನೀರಿನ ಸಮಸ್ಯೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಡಾವಣೆಗಳು ಪುರಸಭೆ ವ್ಯಾಪ್ತಿಗೆ ಸೇರದೆ ಸಮೀಪದ ಗ್ರಾಪಂಗಳ ವ್ಯಾಪ್ತಿಯಲ್ಲಿವೆ. ಜಲಜೀವನ್ ಮಿಷನ್‌ಗೆ ಸೇರ್ಪಡೆಯಾಗಿದ್ದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ನೀರಿನ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕಾಮಗಾರಿ ಪೂರ್ಣಗೊಳಿಸಿ ಜಲಜೀವನ್ ಮೂಲಕ ನೀರು ಪೂರೈಸಲು ಶಾಸಕ ಮಂಜು ಸೂಚಿಸಿದರು.

200 ಮೀ. ಅಂತರ ಕಡ್ಡಾಯ: ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಗ್ರಾಮ ಪಂಚಾಯಿತಿಗಳ ಸಕ್ರಿಯ ಕೊಳವೆಬಾವಿಗಳ ಸುತ್ತ 200 ಮೀಟರ್ ಅಂತರದಲ್ಲಿ ಖಾಸಗಿ ಕೊಳವೆಬಾವಿ ಕೊರೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಸೂಚಿಸಿದರು. ತಹಸೀಲ್ದಾರ್ ಶ್ರೇಯಸ್, ತಾಪಂ ಇಒ ಕೆ.ಸುಷ್ಮಾ, ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಜಲಜೀವನ್ ಮಿಷನ್ ಎಂಜಿನಿಯರ್‌ಗಳಾದ ರಶ್ಮಿ, ಪ್ರವೀಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net