ಕಾಲೇಜು ವಿದ್ಯಾರ್ಥಿಗಳ ರಾಜ್ಯೋತ್ಸವ ಸಂಭ್ರಮ

ಸಾರಿಗೆ ಬಸ್‌ಗೆ ವಿಶೇಷ ಪೂಜೆ ಸಲ್ಲಿಕೆ
 ಹಲಗೂರು ಸಾರಿಗೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್‌ಗೆ ಪೂಜೆ ಸಲ್ಲಿಸಿದರು.
ಹಲಗೂರು ಸಾರಿಗೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್‌ಗೆ ಪೂಜೆ ಸಲ್ಲಿಸಿದರು.
Published on: 

ಹಲಗೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವ ಆಯೋಜಿಸಲಾಗಿತ್ತು.

ಈ ಅಂಗವಾಗಿ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಹಲಗೂರಿನಿಂದ ಚನ್ನಪಟ್ಟಣಕ್ಕೆ ವ್ಯಾಸಂಗಕ್ಕೆ ದಿನನಿತ್ಯ ಬೆಳಗಿನ 7.30ಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗೆ ಭುವನೇಶ್ವರಿ ಭಾವಚಿತ್ರ ಅಳವಡಿಸಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಎಲ್ಲರಿಗೂ ಸಿಹಿ ವಿತರಿಸಲಾಯಿತು. ಪಟಾಕಿ ಸಿಡಿ ವಿದ್ಯಾರ್ಥಿಗಳು ಸಂಭ್ರಮಿಸಿದರು.

ವಿದ್ಯಾರ್ಥಿ ಉಮೇಶ್ ಆರಾಧ್ಯ ಮಾತನಾಡಿ, ನಾವು ಮೂರು ವರ್ಷದಿಂದ ಇದೇ ಬಸ್ಸಿನಲ್ಲಿ ವ್ಯಾಸಂಗಕ್ಕಾಗಿ ಚನ್ನಪಟ್ಟಣಕ್ಕೆ ಹೋಗುತ್ತಿದ್ದೇವೆ. ನಮ್ಮನ್ನು ಸರಿಯಾದ ಸಮಯಕ್ಕೆ ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕರು ಕರದೊಯ್ಯುತ್ತಿದ್ದಾರೆ. ನಾವು ದಿನನಿತ್ಯ ಸಂಚರಿಸುವ ಈ ಬಸ್ಸಿಗೆ ವಿಶೇಷ ಪೂಜೆ ಸಲ್ಲಿಸಿ, ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ನಿರ್ಧರಿಸಿ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಪ್ರತಿ ವರ್ಷ ಹೀಗೆ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಇದು ಮೂರನೇ ವರ್ಷದ ಕನ್ನಡ ರಾಜ್ಯೋತ್ಸವ. ನಮಗೆ ನಮ್ಮ ನಾಡು-ನುಡಿ, ನೆಲ-ಜಲದ ಬಗ್ಗೆ ಗೌರವ ಇರಬೇಕು. ನಮ್ಮ ಕನ್ನಡ ಭಾಷೆಗೆ ಮೊದಲು ಆದ್ಯತೆ ನೀಡಬೇಕು ಎಂದರು.

ಚಾಲಕರಾದ ಕೃಷ್ಣ, ನಿರ್ವಾಹಕ ಭೀಮ ಮತ್ತು ವಿದ್ಯಾರ್ಥಿಗಳಾದ ಪುಣ್ಯಾ, ಲಕ್ಷ್ಮೀಶ್ರೀ, ಲಕ್ಷ್ಮೀ, ಐಶ್ವರ್ಯಾ ಮತ್ತು ಮನೋಜ್ ಆರಾಧ್ಯ, ಶಿವ, ಪುನೀತ್,ದರ್ಶನ್, ಸಿದ್ದು, ಬೈರಾ, ಸಾಗರ ಸೇರಿದಂತೆ ಇತರರು ಇದ್ದರು.