ಕಬ್ಬಿನ ಎಫ್‌ಆರ್‌ಪಿ ಹೆಚ್ಚಳಕ್ಕೆ ಪಟ್ಟು

ರೈತ ಸಂಘ ಪ್ರತಿಭಟನೆ
ಬೇಡಿಕೆ ಈಡೇರಿಸಲು ಆಗ್ರಹಿಸಿ ಕಿಕ್ಕೇರಿ ಸಮೀಪದ ಮಾಕವಳ್ಳಿ ಹೇಮಗಿರಿ ಸಕ್ಕರೆ ಕಾರ್ಖಾನೆ ಮುಂದೆ ರೈತ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಕುಮಾರ್, ಮಂಜುನಾಥ್, ಮಂಜೇಗೌಡ, ದೇವರಾಜು ಮತ್ತಿತರರಿದ್ದರು.
ಬೇಡಿಕೆ ಈಡೇರಿಸಲು ಆಗ್ರಹಿಸಿ ಕಿಕ್ಕೇರಿ ಸಮೀಪದ ಮಾಕವಳ್ಳಿ ಹೇಮಗಿರಿ ಸಕ್ಕರೆ ಕಾರ್ಖಾನೆ ಮುಂದೆ ರೈತ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಕುಮಾರ್, ಮಂಜುನಾಥ್, ಮಂಜೇಗೌಡ, ದೇವರಾಜು ಮತ್ತಿತರರಿದ್ದರು.
Published on: 

ಕಿಕ್ಕೇರಿ: ರಾಜ್ಯದ ಉತ್ತರ ಕರ್ನಾಟಕ ಜಿಲ್ಲೆಯ ಅನೇಕ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನಲ್ಲಿ ಎಫ್‌ಆರ್‌ಪಿಗಿಂತ ಹೆಚ್ಚುವರಿ ದರ ನೀಡಲು ಘೋಷಿಸಿದ್ದು, ಹೇಮಗಿರಿ ಸಕ್ಕರೆ ಕಾರ್ಖಾನೆ ಕೂಡ ಈ ನೀತಿ ಪಾಲಿಸಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘದಿಂದ ಬುಧವಾರ ಪ್ರತಿಭಟನೆ ನಡೆಯಿತು.

ಸಮೀಪದ ಮಾಕವಳ್ಳಿಯ ಹೇಮಗಿರಿ ಸಕ್ಕರೆ ಕಾರ್ಖಾನೆ ಮುಂದೆ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಘೋಷಣೆ ಕೂಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಎಫ್‌ಆರ್‌ಪಿ ಟನ್‌ಗೆ ಪ್ರಸಕ್ತ ಸಾಲಿನಲ್ಲಿ 3,383ರೂ. ಇದೆ. ಇದರ ಜತೆ 1,350 ರೂ. ನೀಡಲೇಬೇಕು. ಈ ವರ್ಷ ಮಳೆ ಇಲ್ಲದೆ ಬೆಳೆ ಇಲ್ಲವಾಗಿದೆ. ಕಬ್ಬು ಕಟಾವು ಅಂತಿಮ ಹಂತಕ್ಕೆ ಬಂದಿದೆ. ರಸಗೊಬ್ಬರ ಸೇರಿ ಕೃಷಿ ಕೂಲಿ ಕಾರ್ಮಿಕರ ವೆಚ್ಚ ಎಲ್ಲವೂ ಹೆಚ್ಚಾಗಿದೆ. ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆ ಕೂಡ ಆಗಿದೆ. ಈ ಎಲ್ಲವನ್ನು ಪರಿಗಣಿಸಿ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಕಾರ್ಖಾನೆಯವರು ಈಡೇರಿಸಲೇಬೇಕು. ಸಕ್ಕರೆ ಬೆಲೆ 50 ರೂ.ಗಿಂತ ಹೆಚ್ಚಾಗಿ ಮಾರಾಟ ಮಾಡಿದರೆ ಶೇ.75 ಲಾಭಾಂಶ ಹೆಚ್ಚುವರಿಯಾಗಿ ನೀಡಲೇಬೇಕು ಎಂದು ಒತ್ತಾಯಿಸಿದರು.

ಹೆಚ್ಚುವರಿ ಹಣ ನೀಡಲು ಮುಂದಾಗದಿದ್ದರೆ ಇದೇ. ನ.25ರ ನಂತರ ಸಕ್ಕರೆ ಮಾರಾಟ ಮಾಡದಂತೆ ತಡೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾರ್ಖಾನೆ ಹಿರಿಯ ಮುಖ್ಯ ವ್ಯವಸ್ಥಾಪಕ ಆರ್.ವರದರಾಜನ್ ರೈತ ಸಂಘದವರ ಮನವಿ ಸ್ವೀಕರಿಸಿ ಮಾತನಾಡಿ, ಕಬ್ಬಿನ ದರ ನಿಗದಿ ಪಡಿಸಲು ಸರ್ಕಾರ ಸಮಿತಿ ರಚಿಸಿದೆ. ರೈತರ ಸಮಸ್ಯೆಗೆ ಸ್ಪಂದಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ತಾಲೂಕು ಕಬ್ಬು ಬೆಳೆಗಾರ ಸಂಘದ ಕಾರಿಗನಹಳ್ಳಿ ಕುಮಾರ್, ಬೋರಾಪುರ ಮಂಜುನಾಥ್, ಕಾಯಿ ಮಂಜೇಗೌಡ, ದೇವರಾಜು, ವಡಕಹಳ್ಳಿ ಮಂಜೇಗೌಡ, ಕುಮಾರ್, ಎಂ.ಸಿ. ರಾಮೇಗೌಡ, ನಾಗೇಶ್, ವೇಣು, ಮಧು, ಬೋಜನಾಯಕ್, ಚಿಕ್ಕಳಲೆ ಮಂಜೇಗೌಡ, ರಾಘವೇಂದ್ರ, ಜಾನಕಮ್ಮ ಇತರರಿದ್ದರು.